ಎಸ್‌ಡಿಪಿಐನಿಂದ ಬಕ್ರೀದ್ ಪ್ರಯುಕ್ತ ಮಾಧ್ಯಮ ಸ್ನೇಹಕೂಟ

Update: 2018-09-10 12:11 GMT

ಮಂಗಳೂರು, ಸೆ.10: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಬಕ್ರೀದ್ ಪ್ರಯುಕ್ತ ಮಾಧ್ಯಮ ಸ್ನೇಹಕೂಟ ಕಾರ್ಯಕ್ರಮವನ್ನು ನಗರದ ಬಲ್ಮಠದ ಸಹೋದಯ ಸಭಾಂಗಣದಲ್ಲಿ ಸೋಮವಾರ ಜರುಗಿತು.

ಮಾಧ್ಯಮ ಸ್ನೇಹಕೂಟದಲ್ಲಿ ಮಾತನಾಡಿದ ಎಸ್‌ಡಿಪಿಐನ ರಾಜ್ಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್, ದೇಶದಲ್ಲಿನ ಕೆಲವು ರಾಜಕೀಯ ಪಕ್ಷಗಳು ದಲಿತ, ದಮನಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು, ಜಾತ್ಯತೀಯ ಪರ ಇರುವುದಾಗಿ ಹೇಳುತ್ತಾ ತೋರ್ಪಡಿಕೆಯ ರಾಜಕಾರಣ ಮಾಡುತ್ತಿವೆ. ಆದರೆ ಎಸ್‌ಡಿಪಿಐ ತೋರ್ಪಡಿಸುವ ರಾಜಕೀಯ ಪಕ್ಷವಲ್ಲ ಎಲ್ಲರಿಗೂ ಸಮಾನ ಅವಕಾಶ ನೀಡುವ ಪಕ್ಷವಾಗಿದೆ ಎಂದು ಸ್ಪಷ್ಟಪಡಿಸಿದರು.

ಎಸ್‌ಡಿಪಿಐ ಮಹಿಳಾ ವಿರೋಧಿ ಪಕ್ಷವಲ್ಲ. ಇತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಸ್‌ಡಿಪಿಐ ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಆದರೆ ಚುನಾವಣಾ ಪ್ರಚಾರ ಬಿತ್ತಿಪತ್ರದಲ್ಲಿ ಅವರ ಪತಿಯಂದಿರ ಪೋಟೊ ಹಾಕಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ಕೇಳಿಬಂದಿತ್ತು. ಆದರೆ ಇದು ಸುಳ್ಳು. ಪಕ್ಷದಲ್ಲಿ ಮಹಿಳೆಯರಿಗೆ ಪ್ರಧಾನ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಸಾವಿರಾರು ಪಕ್ಷಗಳಿವೆ. ಅದರಲ್ಲಿ ಎಸ್‌ಡಿಪಿಐ ಒಂದಾಗಿದೆ. ಆದರೆ ದೇಶದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನಗಳಿಗೂ ಪಕ್ಷ ಸ್ಪಂದಿಸುತ್ತದೆ. ದೇಶಾದ್ಯಂತ ಪಕ್ಷದ ಬಗ್ಗೆ ಋಣಾತ್ಮಕ, ಗುಣಾತ್ಮಕವಾಗಿ ಅಭಿಪ್ರಾಯವಿದೆ. ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಹಲ್ಲೆ, ಥಳಿತ, ಅತ್ಯಾಚಾರದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ಮಾಧ್ಯಮಗಳು ತುಟಿ ಬಿಚ್ಚುತ್ತಿಲ್ಲ. ಇಂತಹ ಹಲವು ಗಂಭೀರ ವಿಷಯಗಳಿದ್ದರೂ ಎಸ್‌ಡಿಪಿಐ, ಪಿಎಫ್‌ಐ ಪಕ್ಷಗಳನ್ನು ನಿಷೇಧಿಸಬೇಕು ಎನ್ನುವುದು ಸಲ್ಲದು ಎಂದರು.

ಈ ಸಂದರ್ಭದಲ್ಲಿ ಪಿಂಗಾರ ಪತ್ರಿಕೆಯ ಸಂಪಾದಕ ರೆಮಾಂಡ್ ಡಿಕುನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೊ, ಅಬ್ದುಲ್ ಮಜೀದ್ ಭಾಗವಹಿಸಿದ್ದರು.

ಸಮಾರಂಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಎ.ಎಂ.ಅಥಾವುಲ್ಲಾಹ್ ಜೋಕಟ್ಟೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ನಿರೂಪಿಸಿದರು. ಸಾಹುಲ್ ಹಮೀದ್ ವಂದಿಸಿದರು.

ತಕ್ಷಣದ ಅಗತ್ಯಕ್ಕೆ ದಲಿತರ ಬಳಕೆ: ಬಿ.ಎಂ.ಬಶೀರ್

ರಾಜಕೀಯ ಪಕ್ಷಗಳಿಂದ ದಲಿತರು, ಮುಸ್ಲಿಮರನ್ನು ರಾಜಕೀಯ ಉದ್ದೇಶಕ್ಕಾಗಿಯೇ ಬೇರೆಬೇರೆ ಮಾಡುವ ಕೆಲಸ ನಡೆಯುತ್ತಿದೆ. ಸಾಮಾಜಿಕ ವಲಯದಲ್ಲಿ ದಲಿತರು, ಮುಸ್ಲಿಮರು ಒಂದಾಗಬೇಕು. ಮುಸ್ಲಿಮರು ಮತ್ತು ದಲಿತರ ತಾಯಿಬೇರು ಒಂದೇ ಆಗಿದೆ. ಆದರೆ, ದಲಿತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಲ್ಲಿ ಮುಸ್ಲಿಂ ಸಂಘಟನೆಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ ಎಂದು ‘ವಾರ್ತಾಭಾರತಿ’ಯ ಸುದ್ದಿ ಸಂಪಾದಕ ಬಿ.ಎಂ.ಬಶೀರ್ ಪ್ರಶ್ನಿಸಿದರು.

ಎಸ್‌ಡಿಪಿಐನಿಂದ ಬಕ್ರೀದ್ ಪ್ರಯುಕ್ತ ನಡೆದ ಮಾಧ್ಯಮ ಸ್ನೇಹಕೂಟ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ಮಹಿಳೆಯರಲ್ಲೂ ಅತ್ಯುನ್ನತ ವಿಜ್ಞಾನಿಗಳು, ಶಿಕ್ಷಣತಜ್ಞರು ಇದ್ದಾರೆ. ಮಹಿಳೆಯರ ಕೈಯಲ್ಲಿ ದೇಶದ ಆಡಳಿತ ನಡೆಸುವ ಸಾಮರ್ಥ್ಯವಿದೆ. ಉಕ್ಕಿನಮಹಿಳೆ ಇಂದಿರಾಗಾಂಧಿ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದ್ದಾರೆ. ಮಹಿಳೆಯರಿಗೆ ಎಸ್‌ಡಿಪಿಐನಲ್ಲೂ ಉನ್ನತ ಹುದ್ದೆಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಒಂದರಿಂದ 10ನೇ ತರಗತಿವರೆಗೆ ಮದ್ರಸಗಳಲ್ಲಿಯೇ ಶಿಕ್ಷಣ ಪಡೆಯುವ ಮುಸ್ಲಿಂ ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿ ಕಾಲೇಜಿಗೆ ಬಂದಾಗ ಅಪರಿಚಿತರಂತಾಗುತ್ತಾರೆ. ಉಳಿದವರು ಟೋಪಿ ನೋಡಿ ಹೆದರಿದರೆ, ಮುಸ್ಲಿಮರು ಜನಿವಾರಗಳನ್ನು ನೋಡಿ ಹೆದರುವಂತಾಗಿದೆ. ಇದಕ್ಕೆ ಕ್ಯಾಂಪಸ್ ಫ್ರಂಟ್‌ಗಳಿಂದ ಇಂತಹ ಬಿಕ್ಕಟ್ಟನ್ನು ಹೋಗಲಾಡಿಸುವಂತಹ ತರಬೇತಿ ಕಾರ್ಯಕ್ರಮ ಹಾಕಿಕೊಳ್ಳಬೇಕು.
- ಬಿ.ಎಂ.ಬಶೀರ್
‘ವಾರ್ತಾಭಾರತಿ’ಯ ಸುದ್ದಿ ಸಂಪಾದಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News