ಯುಎಇ : ಪ್ರೊ. ಯು.ಟಿ. ಇಫ್ತಿಕಾರ್ ಅಲಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Update: 2018-09-10 12:49 GMT

ಮಂಗಳೂರು, ಸೆ. 10: ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಜ್ಮಾನ್ ನಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಂಗಳೂರಿನ ಪ್ರೊ. ಯು.ಟಿ. ಇಫ್ತಿಕಾರ್ ಅಲಿ ಅವರಿಗೆ ಫಿಸಿಯೋತೆರಪಿ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದುಬೈ ಹೆಲ್ತ್ ಅಥಾರಿಟಿಯ ಅಧ್ಯಕ್ಷ ಹಾಗು ಮಹಾ ನಿರ್ದೇಶಕ ಹುಮೈದ್ ಅಲ್ ಖುತಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಮ್ಮೇಳನದಲ್ಲಿ ಜಗತ್ತಿನ ವಿವಿಧೆಡೆಯ ಪರಿಣತ ಫಿಸಿಯೋತೆರಪಿಸ್ಟ್ ಗಳು ಭಾಗವಹಿಸಿ, ಪ್ರಶಸ್ತಿ ಸ್ವೀಕರಿಸಿದರು. ಭಾರತದಿಂದ ಪ್ರಶಸ್ತಿಗೆ ಪಾತ್ರರಾದ ಏಕೈಕ ಫಿಸಿಯೋತೆರಪಿಸ್ಟ್ ಡಾ. ಯು.ಟಿ. ಇಫ್ತಿಕಾರ್ ಅಲಿ.

ಅಜ್ಮಾನ್ ನ ತುಂಬೆ ಮೆಡಿಸಿಟಿಯಲ್ಲಿ ತುಂಬೆ ಫಿಸಿಕಲ್ ತೆರಪಿ ಆ್ಯಂಡ್ ರಿಹ್ಯಾಬಿಲಿಟೇಷನ್ ಹಾಸ್ಪಿಟಲ್ ಆಯೋಜಿಸಿದ್ದ ಈ ಸಮ್ಮೇಳನದಲ್ಲಿ ತುಂಬೆ ಗ್ರೂಪ್ ನ ಸ್ಥಾಪಕಾಧ್ಯಕ್ಷ ಡಾ . ಮೊಯ್ದಿನ್ ತುಂಬೆ ಅಧ್ಯಕ್ಷತೆ ವಹಿಸಿದ್ದರು. ಯುಎಇಗೆ ಭಾರತದ ರಾಯಭಾರಿ ನವದೀಪ್ ಸಿಂಗ್ ಸೂರಿ, ಯುಎಇಯಲ್ಲಿ ಇಟಲಿ ರಾಯಭಾರಿ ಲಿಬೋರಿಯೋ ಸ್ಟೆಲಿನೊ, ಇಟಲಿಯ ಕಾನ್ಸುಲ್ ಜನರಲ್ ವಾಲೆಂಟಿನಾ ಸೆಟ್ಟ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವ್ ರಿಚರ್ಡ್ಸನ್ ಹಾಗು ಪಾಕಿಸ್ತಾನದ ಮಾಜಿ ಸ್ಟಾರ್ ಕ್ರಿಕೆಟಿಗ ವಸೀಮ್ ಅಕ್ರಮ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು. 

ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರ ಸೋದರನಾಗಿರುವ ಪ್ರೊ. ಯು.ಟಿ. ಇಫ್ತಿಕಾರ್ ಅರೋಗ್ಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದವರು. ಮಂಗಳೂರಿನ ಎಂ.ವಿ. ಶೆಟ್ಟಿ ಫಿಸಿಯೊತೆರಪಿ ಕಾಲೇಜಿನ ಡೀನ್ ಆಗಿರುವ ಪ್ರೊ.ಇಫ್ತಿಕಾರ್ ರಾಜೀವ್ ಗಾಂಧಿ ಅರೋಗ್ಯ ವಿವಿಯ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಫಿಸಿಯೋತೆರಪಿಸ್ಟ್ ಗಳ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ರಾಜ್ಯ ಫಿಸಿಯೊತೆರಪಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದಾರೆ. ಯು.ಟಿ. ಫರೀದ್ ಪ್ರತಿಷ್ಠಾನದ ಅಧ್ಯಕ್ಷರಾಗಿ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಮಂಗಳೂರು, ಬೆಂಗಳೂರು, ದೆಹಲಿ ಮಾತ್ರವಲ್ಲದೆ ವಿಶ್ವದ ವಿವಿಧೆಡೆಗಳ ಪ್ರತಿಷ್ಠಿತ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಮತ್ತು ಅರೋಗ್ಯ ಕ್ಷೇತ್ರದ ತಜ್ಞರ ನಿಕಟ ಸಂಪರ್ಕದಲ್ಲಿರುವ ಪ್ರೊ.ಇಫ್ತಿಕಾರ್ ಇವುಗಳ ಮೂಲಕ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. 

ಇವರ ಪತ್ನಿ ಡಾ. ಅಂಜುಮ್ ಇಫ್ತಿಕಾರ್ ಕೊಚ್ಚಿಯ ಏಮ್ಸ್ ನಲ್ಲಿ ಗರ್ಭಕೋಶದ ಕ್ಯಾನ್ಸರ್ ಕುರಿತ ಉನ್ನತ ಅಧ್ಯಯನ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ತಜ್ಞರಾಗಲಿರುವ ಮಂಗಳೂರಿನ  ಮಹಿಳೆ ಇವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News