ಪೊಲೀಸರು ಬಂದ್ ವೇಳೆ ಬಂಧಿಸಿದವರ ಮಾಹಿತಿ ನೀಡಲಿ: ಶಾಸಕ ವೇದವ್ಯಾಸ ಕಾಮತ್

Update: 2018-09-10 13:00 GMT

ಮಂಗಳೂರು, ಸೆ.10: ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಭಾರತ ಬಂದ್‌ಗೆ ಕರೆ ಕೊಟ್ಟಿದ್ದ ವೇಳೆ ನಗರದ ವಿವಿಧೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆಗಳು ನಡೆದಿದ್ದು, ಜನಸಾಮಾನ್ಯರಿಗೆ ವಿನಾಕಾರಣ ತೊಂದರೆಯಾಗಿದೆ. ಈ ವೇಳೆ ಪೊಲೀಸ್ ಇಲಾಖೆಯಿಂದ ಎಷ್ಟು ಮಂದಿ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿಯನ್ನು ಸ್ಪಷ್ಟಪಡಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.

ನಗರದ ಕೊಡಿಯಾಲ್‌ಬೈಲ್‌ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಸಿ ಹಾಸ್ಪಿಟಾಲ್‌ನ ಕ್ಯಾಂಟೀನ್‌ನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದರು. ಇದರಿಂದ ಆಸ್ಪತೆಯಲ್ಲಿ ರೋಗಿಗಳು ಹಾಗೂ ಸಮಬಂಧಿಸಿದವರಿಗೆ ಹೆಚ್ಚಿನ ಸಮಸ್ಯೆ ಅನುಭವಿಸುವಂತಾಗಿದೆ. ನಗರದಲ್ಲಿ ಪ್ರತಿಭಟನೆ, ಮೆರವಣಿಗೆಗೆ ಸಂಬಂಧಿಸಿದಂತೆ ಅನುಮತಿ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದರು.

ನಗರದಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ. ಕೆಲ ಅಂಗಡಿಗಳ ಮಾಲಕರಿಗೆ ಬೆದರಿಕೆ ಹಾಕಿ ಬಾಗಿಲು ಮುಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂಗಡಿಗಳ ಮಾಲಕರು ಹಾಗೂ ಹೊಟೇಲ್ ಉದ್ಯಮಿಗಳಿಗೆ ಹೆದರಿಸಿದ್ದಾರೆ. ಈ ಕುರಿತು ಹಲವರು ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ನಗರದ ಜ್ಯೋತಿ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ರಿಕ್ಷಾವೊಂದರಲ್ಲಿ ಮಹಿಳೆ ಕೆಎಂಸಿ ಆಸ್ಪತ್ರೆಗೆ ತೆರಳುತ್ತಿದ್ದರು. ಆಕೆಯನ್ನು ಕೈಹಿಡಿದು ತಡೆದು ರಸ್ತೆಗೆ ಯಾಕೆ ಬಂದಿದ್ದೀರಿ ಎಂದು ಪ್ರತಿಭಟನಾಕಾರರು ದಬ್ಬಾಳಿಕೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ತನಗೆ ಮಾಹಿತಿ ನೀಡಿದರು. ತಕ್ಷಣವೇ ತಾನು ಸ್ಥಳಕ್ಕಾಗಮಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡೆ ಎಂದರು.

ಜ್ಯೋತಿ ವೃತ್ತವನ್ನು ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸದಿರುವುದು ಖಂಡನೀಯ. ಮಣ್ಣಗುಡ್ಡೆಯ ರಿಕ್ಷಾ ಮಾಲಕ ಪ್ರಕಾಶ್ ಪೂಜಾರಿ ಪ್ರಯಾಣಿಕರನ್ನು ಕರೆದೊಯ್ಯುವ ವೇಳೆ ಕನ್ನಡಿಯನ್ನು ಪ್ರತಿಭಟನಾಕಾರರು ಪುಡಿಗೈದು ದಾಂಧಲೆ ನಡೆಸಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News