ಜಿ.ವಿ. ಪೈ ಮೆಮೋರಿಯಲ್ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ

Update: 2018-09-10 13:24 GMT

ಮೂಡುಬಿದಿರೆ, ಸೆ.10: ನಾಲ್ಕು ದಶಕಗಳಿಂದ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿರುವ ಮೂಡುಬಿದಿರೆಯ ಜಿ.ವಿ.ಪೈ ಮೆಮೋರಿಯಲ್ ಆಸ್ಪತ್ರೆಯನ್ನು ನವೀಕೃತಗೊಳಿಸಿದ್ದು 35 ಹಾಸಿಗೆಗಳ ಸುಸಜ್ಜಿತ ನೂತನ ಕಟ್ಟಡವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವ ಮೂಲಕ ಲೋಕಾರ್ಪಣೆಗೊಳಿಸಿದರು.

ಸಮಾಜ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆರೋಗ್ಯವಂತ ಸಮಾಜಕ್ಕೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯ. ಶಿಕ್ಷಣದಿಂದ ಸಮಾಜ ಪರಿವರ್ತನೆಯಾದರೆ ಸಾಮಾಜಿಕ ಆರೋಗ್ಯ ಮತ್ತು ವೈಯುಕ್ತಿಕ ಆರೋಗ್ಯ ಉತ್ತಮವಾಗಿದ್ದಾಗ ಸದೃಢ ಸಮಾಜದ ನಿರ್ಮಾಣ ಸಾಧ್ಯ. ದೂರದೃಷ್ಠಿ ಚಿಂತನೆಯ ಎಸ್.ಎನ್.ಮೂಡುಬಿದ್ರಿ ಮತ್ತು ಜಿ.ವಿ.ಪೈ ಅವರು ಆಧುನಿಕ ಮೂಡುಬಿದಿರೆಯ ಬೆಳವಣಿಗೆಗೆ ಬೀಜ ಬಿತ್ತಿದ ಮಹಾನುಭಾವರಾಗಿದ್ದಾರೆ. ಅವರ ಆಶಯದಂತೆ ಈ ಆಸ್ಪತ್ರೆಯು ಜನಸಾಮಾನ್ಯರಿಗೆ ಆದರ್ಶವಾದ ವೈದ್ಯಕೀಯ ಸೇವೆಯನ್ನು ಒದಗಿಸುವಂತಾಗಲಿ ಎಂದು ಹಾರೈಸಿದ ಅವರು ಸುಮಾರು 4 ಲಕ್ಷ ವೆಚ್ಚದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ಘೋಷಿಸಿದರು.

ಮಣಿಪಾಲ ವಿ.ವಿ.ಯ ಪ್ರೋ ಚಾನ್ಸಿಲರ್ ಡಾ. ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಎಂ.ಸಿ.ಎಸ್.ಬ್ಯಾಂಕ್ ವತಿಯಿಂದ 5 ಲಕ್ಷ ನೆರವಿನ ಚೆಕ್‍ನ್ನು ಹಸ್ತಾಂತರಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಹನುಮಂತ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೇವೆಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ವೈದ್ಯರನ್ನು, ಸಿಬ್ಬಂದಿಗಳನ್ನು ಗೌರವಿಸಲಾಯಿತು.

ಟ್ರಸ್ಟ್ ಕಾರ್ಯದರ್ಶಿ ಡಾ. ಹರೀಶ್ ನಾಯಕ್ ಆಸ್ಪತ್ರೆಯ ಹುಟ್ಟು, ಬೆಳವಣಿಗೆ ಮತ್ತು ಹೊಸ ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು. ಟ್ರಸ್ಟ್ನ ಉಪಾಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್.ಎನ್.ಮೂಡುಬಿದ್ರಿಯವರ ಪುತ್ರ ಮನೋಹರ್, ಟ್ರಸ್ಟ್ನ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಡಾ. ಹರೀಶ್ ನಾಯಕ್, ಜೊತೆ ಕಾರ್ಯದರ್ಶಿ ಮನೋಜ್ ಶೆಣೈ, ಕೋಶಾಧಿಕಾರಿ ಸಿ.ಎಸ್.ಗಫೂರ್, ಸದಸ್ಯರಾದ ಜಿ. ನಾಗೇಶ್ ಪೈ, ಡಾ. ಮುರಳಿಕೃಷ್ಣ, ಕೆ. ಅಮರನಾಥ ಶೆಟ್ಟಿ, ಜೆ.ಜೆ.ಪಿಂಟೋ, ಎಚ್. ಸುರೇಶ್ ಪ್ರಭು, ಸಿ. ರಾಮ್‍ಪ್ರಸಾದ್ ಭಟ್ ಉಪಸ್ಥಿತರಿದ್ದರು. ಡಾ. ಮುರಳಿಕೃಷ್ಣ ಸೇವೆಗೈದ್ಯರ ವೈದ್ಯರ ವಿವರ ನೀಡಿದರು. ಸಂಪತ್ ಸಾಮ್ರಾಜ್ಯ ವಂದಿಸಿದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News