ಉಡುಪಿ: ಮುಹರ್ರಮ್ ಸಂದೇಶ ಕಾರ್ಯಕ್ರಮ

Update: 2018-09-10 14:50 GMT

ಉಡುಪಿ, ಸೆ.10: ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮುಹರ್ರಮ್ ಸಂದೇಶ ಕಾರ್ಯಕ್ರಮವನ್ನು ಉಡುಪಿ ಜಾಮೀಯ ಮಸೀದಿಯಲ್ಲಿ ರವಿವಾರ ಆಯೋಜಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಜಮಾಅತೆ ಇಸ್ಲಾಮಿ ಹಿಂದ್‌ನ ಉಪಾಧ್ಯಕ್ಷ ಇಸಾಕ್ ಪುತ್ತೂರು ಮಾತನಾಡಿ, ಮಾನಸಿಕ ಮತ್ತು ದೈಹಿಕ ಹಿಂಸೆಗಳ ನಂತರ ತನ್ನನ್ನು ಕೊಲ್ಲುವ ಸಂಚು ಹೆಣೆದಿರುವುದನ್ನು ಅರಿತ ಮುಹಮ್ಮದ್ ಪೈಗಂಬರರು ಸತ್ಯ, ಮಾವವೀಯತೆ ಹಾಗೂ ನ್ಯಾಯದ ಸ್ಥಾಪನೆಗಾಗಿ ತ್ಯಾಗ ಬಲಿದಾನ ಗಳನ್ನು ನೀಡಿ ಮದೀನಕ್ಕೆ ವಲಸೆ ಹೋದರು. ವೈರಿಗಳು ಬೆನ್ನಟ್ಟ ಬಹುದೆಂಬುದರ ಮುನ್ನೆಚ್ಚರಿಕೆಯಾಗಿ ಪೂರ್ಣಸಿದ್ಧತೆ ಹಾಗೂ ಯೋಜನೆಯನ್ನು ರೂಪಿಸಿದರು. ಮದೀನ ತಲುಪಿದ ನಂತರ ಒಗ್ಗಟ್ಟಾಗಿ ನಗರದ ನಿರ್ಮಾಣಕ್ಕಾಗಿ ಯೆಹೂದಿ ಮತ್ತು ಇತರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದರು.

ಹಝ್ರತ್ ಹುಸೈನರು ಪ್ರವಾದಿ ಮತ್ತು ಸಂಗಡಿಗರಿಂದ ಸ್ಥಾಪಿತ ಆಡಳಿತವು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ ವಂಶಾಡಳಿತ ಮತ್ತು ನಿರಂಕುಶ ಸರ್ವಾಧಿಕಾರ ದೆಡೆ ಹೋಗುವುದರ ವಿರುದ್ಧ ಹೋರಾಡಿ ತನ್ನ ಪರಿವಾರ ಸಮೇತ ಹುತಾತ್ಮ ರಾದ ಬಹುದೊಡ್ಡ ತ್ಯಾಗ ಮಾದರಿಯಾಗಿದೆ ಎಂದರು.

ಅತಿಥಿಯಾಗಿ ಕುಕ್ಕಿಕಟ್ಟೆ ಮಸೀದಿಯ ಖತೀಬ್ ಸೈಯದ್ ಹುಸೈನ್ ಅಹ್ಮದ್ ಮಾತನಾಡಿ, ಮಾನವರನ್ನು ದೇವನು ತನ್ನ ಪ್ರತಿನಿಧಿಯಾಗಿ ಕಳಿಸಿದ್ದಾನೆ. ನಮಗಿರುವ ಉದಾತ್ತ ಉದ್ದೇಶ ಮತ್ತು ಹೊಣೆಗಾರಿಕೆಯನ್ನು ಕಡೆಗಣಿಸಿದರೆ, ಪ್ರವಾದಿಗಳು ಮತ್ತು ಅವರ ಸಂಗಡಿಗರ ತ್ಯಾಗ ಬಲಿದಾನಗಳನ್ನು ವ್ಯರ್ಥ ಗೊಳಿಸಿದಂತೆ ಆಗುತ್ತದೆ. ಅದು ಉತ್ತಮ ಸಮುದಾಯಕ್ಕೆ ಶೋಭೆಯೇ ಅಲ್ಲ ಎಂದು ಹೇಳಿದರು.

ಅಲ್ ಇಬಾದ ಶಾಲೆಯ ಸಂಚಾಲಕ ಅಬ್ದುಲ್ಲತೀಫ್ ಮದನಿ ಮಾತನಾಡಿ, ಮದ್ಯ ಸೇವನೆಯ ಚಟ ಸಮಾಜದಲ್ಲಿ ಕೆಡುಕುಗಳನ್ನು ವ್ಯಾಪಕಗೊಳಿ ಸುತ್ತದೆ. ಅಶ್ಲೀಲತೆ ಹಾಗೂ ಅನೈತಿಕತೆಗಳಿಗೆ ಕಾನೂನಿನ ರಕ್ಷಣೆ ಸಿಗುತ್ತಿರುವ ವ್ಯವಸ್ಥೆಯ ಲೋಪಗಳ ಕಡೆಗೆ ಗಮನ ನೀಡುವುದು ನಮ್ಮ ಹೊಣೆಗಾರಿಕೆ ಯಾಗಿದೆ ಎಂದರು.

ಇಂದ್ರಾಳಿ ಜುಮಾ ಮಸೀದಿಯ ಖತೀಬ್ ಮಸೀಹುಲ್ಲಾಹ್ ಕಾಸ್ಮೀ ಮಾತನಾಡಿದರು. ಉಡುಪಿ ಜಮಾಅತೆ ಇಸ್ಲಾಮಿ ಹಿಂದ್ ಹಂಗಾಮಿ ಅಧ್ಯಕ್ಷ ಅಬ್ದುಲ್ ಅಝೀಝ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News