‘ಕಾಂಗ್ರೆಸ್‌ನ ಬಲಾತ್ಕಾರ ಬಂದ್ ಯತ್ನ ಎಲ್ಲಾ ಘಟನೆಗಳಿಗೆ ಕಾರಣ’

Update: 2018-09-10 15:15 GMT

ಉಡುಪಿ, ಸೆ.10: ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಗಿನಿಂದಲೇ ನಡೆಸಿದ ಬಲಾತ್ಕಾರದ ಬಂದ್ ಇಂದಿನ ಎಲ್ಲಾ ಅಹಿತಕರ ಘಟನೆಗಳಿಗೆ ಕಾರಣವಾಯಿತು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದ್ದಾರೆ.

ಕಡಿಯಾಳಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವೃದ್ದರು, ಮಹಿಳೆಯರು ಎಂದು ನೋಡದೇ ಎಲ್ಲರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತರಕಾರಿ ಅಂಗಡಿಗಳಲ್ಲಿದ್ದ ತರಕಾರಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ. ಇನ್ನೂ ಬಾಗಿಲು ತೆರೆದ ಕೆಲವು ಅಂಗಡಿಗಳ ವಸ್ತುಗಳನ್ನು ಎಸೆದು ಹಾನಿಗೊಳಿಸಿದ್ದಾರೆ ಎಂದು ರಘುಪತಿ ಭಟ್ ನುಡಿದರು.

ಈ ವೇಳೆ ಅವರ ಜೊತೆಗಿದ್ದ ಪೊಲೀಸರು ವ್ಯಾಪಾರಿಗಳಿಗೆ ರಕ್ಷಣೆ ನೀಡುವ ಬದಲು ಮೂಕಪ್ರೇಕ್ಷಕರಾಗಿದ್ದು, ಅವರಿಗೆ ಬೆಂಗಾವಲಿನಂತಿದ್ದರು. ಬಸ್ ನಿಲ್ದಾಣ, ರಥಬೀದಿಗಳಲ್ಲಿ ಇವರು ದಾಂದಲೆ ನಡೆಸುವಾಗಲೇ ಪೊಲೀಸರು ಅವರನ್ನು ತಡೆದಿದ್ದರೆ, ಮುಂದೆ ಲಾಠಿ ಪ್ರಹಾರ ನಡೆಸುವ ಪ್ರಮೇಯವೇ ಬರುತ್ತಿರಲಿಲ್ಲ ಎಂದರು.

ಇದರಿಂದಾಗಿಯೇ ಕಲ್ಸಂಕ, ಕಡಿಯಾಳಿ, ಮಣಿಪಾಲಗಳಲ್ಲೂ ನಗರಸಭಾ ಸದಸ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಲವಂತದ ಬಂದ್‌ಗೆ ಮುಂದಾದರು. ಕಡಿಯಾಳಿಯಲ್ಲಿ ಮಹಿಳೆಯರು ಹಾಗೂ ಮಣಿಪಾಲದಲ್ಲಿ ರಿಕ್ಷಾ ಚಾಲಕರು ಮೋದಿ ಪರ ಘೋಷಣೆ ಕೂಗಿದರು ಎಂದರು. ಈ ಹಂತದಲ್ಲಿ ಬಿಜೆಪಿಯ ಜನಪ್ರತಿನಿಧಿಗಳಿಗೆ ಜನಸಾಮಾನ್ಯರಿಂದ ರಕ್ಷಣೆಗಾಗಿ ದೂರವಾಣಿ ಕರೆಗಳು ಬಂದವು. ಆಗ ನಾವು ಜನಸಾಮಾನ್ಯರ ರಕ್ಷಣೆಗೆ ಧಾವಿಸಿದ್ದಾಗಿ ಬಿಜೆಪಿ ಕಾರ್ಯಕರ್ತರನ್ನು ಸಮರ್ಥಿಸಿಕೊಂಡರು.

ಇಂದು ನಡೆದಿದ್ದು ರಾಜಕೀಯ ಪ್ರೇರಿತ ಬಂದ್ ಆಗಿದೆ. ರಾಜ್ಯ ಸರಕಾರ ಇದಕ್ಕೆ ಬೆಂಬಲವನ್ನು ನೀಡಿದೆ. ಆದರೆ ನಾಗರಿಕರು ಜಿಲ್ಲೆಯಲ್ಲಿ ಬಂದ್‌ನ್ನು ವಿರೋಧಿಸಿದ್ದಾರೆ. ಇಂದು ಹಲವು ಬಿಜೆಪಿ ನಗರಸಭಾ ಸದಸ್ಯರು ಸೇರಿದಂತೆ 7-8 ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಇವರಲ್ಲಿ ನಗರ ಬಿಜೆಪಿ ಅಧ್ಯಕ್ಷ, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಗಿರೀಶ ಆಂಚನ್, ದಿವಾಕರ ಪೂಜಾರಿ, ದಿನೇಶ್, ಅರುಣ, ಮುಂತಾದವರು ಮೇಲೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾದ ಹಲ್ಲೆ ನಡೆಸಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದರು.

ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ. ಬಲಾತ್ಕಾರದ ಬಂದ್ ನಡೆಸಿ, ಬಿಜೆಪಿ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಮೇಲೆ ಹಲ್ಲೆ ನಡೆಸಿದವರನ್ನು ಗುರುತಿಸಿ ಪೊಲೀಸರು ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಬಿಜೆಪಿ ಇದರ ವಿರುದ್ಧ ತೀವ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ರಘುಪತಿ ಭಟ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News