ಭಾರತ್ ಬಂದ್: ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ

Update: 2018-09-10 15:17 GMT

ಉಡುಪಿ, ಸೆ.11: ಉಡುಪಿಯಲ್ಲಿ ಸೋಮವಾರ ಭಾರತ್ ಬಂದ್ ವೇಳೆ ನಡೆದ ಘಟನೆಗಳಿಗೆ ಸಂಬಂಧಿಸಿ ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಸೇರಿದಂತೆ ಇತರ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದೆ.

ಜಯಾನಂದ ಎಂಬವರ ಕಲ್ಸಂಕ ಜಂಕ್ಷನ್ ಬಳಿಯ ಪೈಂಟ್ ಹೌಸ್ ಎಂಬ ಅಂಗಡಿಗೆ ಇಂದು ಬೆಳಗ್ಗೆ 9:15ರ ಸುಮಾರಿಗೆ ರಮೇಶ್ ಕಾಂಚನ್ ಮತ್ತು ಇತರ 25ರಿಂದ 30 ಮಂದಿ ಬಂದು ಅಂಗಡಿ ಶೆಟರ್‌ನ್ನು ಬಲಾತ್ಕಾರದಿಂದ ಅರ್ಧಕ್ಕೆ ಮುಚ್ಚಿ, ಈ ದಿನ ಭಾರತ್ ಬಂದ್, ಅಂಗಡಿಯನ್ನು ಮುಚ್ಚಬೇಕು ಎಂದು ಹೇಳಿ ವ್ಯಾಪಾರ ಮಾಡದಂತೆ ತಡೆಯೊಡ್ಡಿ ತೊಂದರೆಯುಂಟು ಮಾಡಿ ರುವುದಾಗಿ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಕುಂಜಿಬೆಟ್ಟು ನಿವಾಸಿ ಚೈತ್ರ ಕುಂದಾಪುರ (26) ಎಂಬವರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಿಯಾಳಿಯ ಶ್ರೀನಿವಾಸ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಿರುವಾಗ ಬಂದ್ ಹಿನ್ನೆಲೆಯಲ್ಲಿ ಹೋಟೆಲ್ ಬಾಗಿಲು ಮುಚ್ಚಿಸಲು ಕಾಂಗ್ರೆಸ್ ಕಾರ್ಯಕರ್ತ ರಮೇಶ್ ಕಾಂಚನ್, ಶೇಖರ್ ಜಿ.ಕೋಟ್ಯಾನ್, ಜನಾರ್ದನ್ ಭಂಡಾರ್ಕರ್, ಜ್ಯೋತಿ ಹೆಬ್ಬಾರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಪ್ರಶಾಂತ್ ಪೂಜಾರಿ ಹಾಗೂ ಇತರರು ಬಂದಿದ್ದು, ಈ ವೇಳೆ ಮೋದಿಗೆ ಜೈಕಾರ ಹಾಕಿದ ನನ್ನನ್ನು ಯತೀಶ್ ಕರ್ಕೇರ ಕೈ ಹಿಡಿದು ಎಳೆದಿದ್ದು, ಜ್ಯೋತಿ ಹೆಬ್ಬಾರ್ ಅಸಭ್ಯವಾಗಿ ನಿಂದಿಸಿದರು. ಇತರರು ನನ್ನನ್ನು ತಳ್ಳಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News