ಭಾರತ್ ಬಂದ್: ಮಂಗಳೂರಲ್ಲಿ ಓರ್ವನ ವಿರುದ್ಧ ದೂರು ದಾಖಲು

Update: 2018-09-10 15:29 GMT

ಮಂಗಳೂರು, ಸೆ.10: ನಗರದಲ್ಲಿ ಸೋಮವಾರ ನಡೆದ ಭಾರತ್ ಬಂದ್ ವೇಳೆ ಶಿವಭಾಗ್‌ನ ಹೊಟೇಲ್‌ವೊಂದಕ್ಕೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾಗಿದೆ.

ಸೋಮವಾರ ಬೆಳಗ್ಗೆ ನಂತೂರು ಕಡೆಯಿಂದ ಬೆಂದೂರ್‌ವೆಲ್ ಕಡೆಗೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿದ ಇಬ್ಬರು ದುಷ್ಕರ್ಮಿಗಳು ಬಂದು ಅದರಲ್ಲಿ ಒಬ್ಬಾತ ಹೊಟೇಲ್ ಮುಂಭಾಗ ಬಂದು ಹೊಟೇಲ್ ಮೇಲೆ ಕಲ್ಲು ತೂರಾಟ ಮಾಡಿದ್ದಾನೆ. ಈ ವೇಳೆ ಶಬ್ದ ಕೇಳಿ ಹೊರಗೆ ಓಡಿ ಬಂದ ಹೊಟೇಲ್ ಸಿಬ್ಬಂದಿ ದುಷ್ಕರ್ಮಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಬೈಕ್ ಮೂಲಕ ಪರಾರಿಯಾಗಿದ್ದಾನೆ.

ಕಲ್ಲು ತೂರಾಟದ ವಿಡಿಯೋ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಇದನ್ನು ಕ್ಲಿಪ್ಪಿಂಗ್ ಪೊಲೀಸರಿಗೆ ನೀಡಲಾಗಿದೆ. ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

60 ಮಂದಿ ಬಂಧನ, ಬಿಡುಗಡೆ

ನಗರದಲ್ಲಿ ಬಂದ್ ವೇಳೆ ಪ್ರತಿಭಟನೆಯಲ್ಲಿ ತೊಡಗಿದ ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಸುಮಾರು 60ಮಂದಿಯನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾರೆ.

ಸೋಮವಾರ ಬೆಳಗ್ಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಹೊರಟು ಕಂಕನಾಡಿಯಲ್ಲಿ ಸೇರಿದ್ದರು. ಈ ಸಂದರ್ಭ ಕದ್ರಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ 49 ಮಂದಿಯನ್ನು ಬಂಧಿಸಿ, ಮಧ್ಯಾಹ್ನ ಬಳಿಕ ಬಿಡುಗಡೆ ಮಾಡಿದ್ದಾರೆ. ಉಳಿದ 11ಮಂದಿ ನಾನಾ ಠಾಣೆಗಳಲ್ಲಿ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News