ಮಂಗಳವಾರ ಜಪಾನ್ ಓಪನ್ ಆರಂಭ

Update: 2018-09-10 18:24 GMT

ಟೋಕಿಯೊ, ಸೆ.10: ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಮಂಗಳವಾರ ಇಲ್ಲಿ ಆರಂಭವಾಗಲಿರುವ ಜಪಾನ್ ಓಪನ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಫೈನಲ್ ಪಂದ್ಯದಲ್ಲಿ ಮುಗ್ಗರಿಸುವ ಚಾಳಿಯನ್ನು ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಸಿಂಧು ಈ ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯಾ ಗೇಮ್ಸ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಮೂರನೇ ಶ್ರೇಯಾಂಕದ ಸಿಂಧು ಜಪಾನ್‌ನ ಸಯಕಾ ತಕಹಶಿ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕ್ವಾರ್ಟರ್ ಫೈನಲ್‌ಗೆ ತಲುಪಿದರೆ ವಿಶ್ವ ಚಾಂಪಿಯನ್ ಕರೊಲಿನ್ ಮರಿನ್ ಅಥವಾ ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಕೆ.ಶ್ರೀಕಾಂತ್ ಹಾಗೂ ಎಚ್‌ಎಸ್ ಪ್ರಣಯ್ ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿನ ಕಳಪೆ ಪ್ರದರ್ಶನ ಉತ್ತಮಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

 ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಚೀನಾದ ಹುಯಾಂಗ್ ಯುಕ್ಸಿಯಾಂಗ್ ಹಾಗೂ ಪ್ರಣಯ್ ಅವರು ಜೋನಾಥನ್ ಕ್ರಿಸ್ಟಿ ಅವರನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ.

 ಕಳೆದ ವರ್ಷ ಸಿಂಗಾಪುರ ಓಪನ್ ಚಾಂಪಿಯನ್ ಆಗಿದ್ದ ಬಿ.ಸಾಯಿ ಪ್ರಣೀತ್ ಹಾಗೂ ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕದ ಜಪಾನ್‌ನ ತಕೆಶಿ ಕಮುರಾ ಹಾಗೂ ಕೆಗೊ ಸೊನೊಡಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News