ಬಂಟ್ವಾಳದಲ್ಲಿ ಅಕಾಲ ಹಲಸು ಮೇಳದ ಸಂಭ್ರಮ

Update: 2018-09-11 05:12 GMT

ಬಂಟ್ವಾಳ, ಸೆ.11: ಹಲಸಿನ ಮೇಳವನ್ನು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಪುತ್ತೂರು ನವಚೇತನ ಸ್ನೇಹ ಸಂಗಮ ಮತ್ತು ಅಕಾಲ ಹಲಸು ಸ್ವಾಗತ ಸಮಿತಿ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಏರ್ಪಡಿಸಿತ್ತು. ಎರಡು ದಿನಗಳ ಕಾಲ ನಡೆಯುವ ಹಲಸು ಮೇಳದಲ್ಲಿ ಮೊದಲ ದಿನ ಶನಿವಾರದಂದು ಹಲಸು ಪ್ರಿಯರು ಹಲಸಿನ ವೈವಿಧ್ಯಮಯ ತಿನಿಸುಗಳನ್ನು ತಿಂದು ಚಪ್ಪರಿಸಿದರು.

ಸೆ.8 ಮತ್ತು 9ರಂದು ಬಂಟ್ವಾಳ-ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಿರುವ ಅಕಾಲ ಹಲಸು ಸಂಗಮ ಹಾಗೂ ಹಲಸಿನ ಖಾದ್ಯ ಮತ್ತು ಕೃಷಿ ಬಗ್ಗೆ ಪ್ರದರ್ಶನ ಮಾರಾಟದ ಮೇಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಕ್ ಚಾಲನೆ ನೀಡಿದರು. ಮೊದಲ ದಿನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ ಜೈನ್ ವಹಿಸಿದ್ದರು. ಆ ಬಳಿಕ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಪಡ್ರೆ ಅವರು ‘ಹಲಸಿನ ವಿಶ್ವ ದರ್ಶನ’ ವಿಚಾರ ಮಂಡಿಸಿದರು. ತದನಂತರ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭ ಪ್ರಕಾಶ ಕಾರಂತ ನರಿಕೊಂಬು, ಕೈಯೂರು ನಾರಾಯಣ ಭಟ್, ಜಿ.ಆನಂದ, ಜಯಾನಂದ ಪೆರಾಜೆ, ಅನಂತಪ್ರಸಾದ್ ನೈತ್ತಡ್ಕ, ಗೋಪಾಲ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

ಏನಿದು ಅಕಾಲ ಹಲಸು ಮೇಳ?

ಹಲಸು ಎಪ್ರಿಲ್ ತಿಂಗಳಿನಿಂದ ಜುಲೈವರೆಗೆ ಸಿಗುತ್ತದೆ. ತಡವಾಗಿ ಕಾಯಿ ಬಿಟ್ಟಿದ್ದ ಮರದಲ್ಲಿ ಮಾತ್ರ ಹಲಸಿನ ಹಣ್ಣುಗಳು ಆಗಸ್ಟ್ ತಿಂಗಳಿನವರೆಗೆ ಇರುತ್ತದೆ. ಆನಂತರ ತಿನ್ನಬೇಕೆಂದರೆ ಮುಂದಿನ ವರ್ಷ ಎಪ್ರಿಲ್‌ವರೆಗೂ ಕಾಯಬೇಕು. ಈ ನಿಟ್ಟಿನಲ್ಲಿ ಹಲಸು ಸಾರ್ವಕಾಲಿಕವಾಗಿ ಸಿಗುವಂತಾಗಬೇಕು ಎಂಬ ದೃಷ್ಟಿಯಿಂದ ಈ ಸಂಗಮವನ್ನು ಏರ್ಪಡಿಸಲಾಗಿದೆ.

►►ವಿಶೇಷತೆಗಳು

ಹಲಸಿನ ಖಾದ್ಯಗಳ ಪ್ರದರ್ಶನ, ಕರ್ನಾಟಕ-ಕೇರಳದ ಹಲಸಿನ ಕೇಕ್, ಒಣ ಕಾಯಿಸೊಳೆ, ಒಣ ಹಣ್ಣು ಸೊಳೆ, ಜೇನಿನಲ್ಲಿ ಅದ್ದಿದ ಸೊಳೆಗಳು ಇತ್ಯಾದಿ ವಿಶೇಷ ತಿಂಡಿಗಳು ಮಳಿಗೆಯಲ್ಲಿದ್ದವು. ಹಲಸು ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರವು ಗಮನಸೆಳೆಯಿತು.

► ಹಲಸಿಗೆ ಉತ್ತಮ ಮಾರುಕಟ್ಟೆ ಲಭಿಸಬೇಕು ಎಂಬ ದೃಷ್ಟಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ.

-ಗೋಪಾಲ ಅಂಚನ್, ಅಕಾಲ ಹಲಸು ಮೇಳ ಸ್ವಾಗತ ಸಮಿತಿಯ ಸದಸ್ಯ

► ಹಲಸಿನ ಬಳಕೆಗೆ ಆದ್ಯತೆ ಕೊಡುವ ದೃಷ್ಟಿಯಿಂದ ‘ಅಕಾಲ ಹಲಸು ಸಂಗಮ’ ಕಾರ್ಯಕ್ರಮವು ಆಯೋಜಿತವಾಗಿದೆ.

-ಅನಂತ್ ಪ್ರಸಾದ್ ನೈತ್ತಡ್ಕ, ಅಧ್ಯಕ್ಷ, ಪುತ್ತೂರು ನವಚೇತನ ಸ್ನೇಹ ಸಂಗಮ

Writer - ಅಬ್ದುಲ್ ರಹಿಮಾನ್, ತಲಪಾಡಿ

contributor

Editor - ಅಬ್ದುಲ್ ರಹಿಮಾನ್, ತಲಪಾಡಿ

contributor

Similar News