ಹಿಂದೂ ಐಕ್ಯ ವೇದಿಕೆಯ ಮುಖಂಡನ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

Update: 2018-09-11 10:57 GMT

ಬಂಟ್ವಾಳ, ಸೆ. 11: ಇಸ್ಲಾಂ ಧರ್ಮದ ಬಗ್ಗೆ ನಿಂದನೆ ಹಾಗೂ ಕೋಮು ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪದಲ್ಲಿ ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಮುಖಂಡ ಸಹಿತ ಕಾರ್ಯಕ್ರಮ ಸಂಘಟಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಂಬು ಜುಮಾ ಮಸೀದಿಯ ಆಡಳಿತ ಸಮಿತಿ ಈ ದೂರು ನೀಡಿದ್ದು, ಸಮಾಜದ ಶಾಂತಿ ಕದಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಸೆ.9ರಂದು ಸಂಜೆ 6:30ಕ್ಕೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಡಂಬು ಘಟಕದ ಜಂಟಿ ಆಶ್ರಯದಲ್ಲಿ ಕಡಂಬುವಿನಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಕಾಸರಗೋಡ್ ಹಿಂದೂ ಐಕ್ಯ ವೇದಿಕೆಯ ಮುಖಂಡ ಪುಷ್ಪರಾಜ್ ಭಟ್ ತನ್ನ ಭಾಷಣದಲ್ಲಿ ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಮುಸ್ಲಿಮರ ಆಚಾರ-ವಿಚಾರ, ಧಾರ್ಮಿಕ ನಂಬಿಕೆಗಳ ಬಗ್ಗೆ ನಿಂದನೆ ಮಾಡಿದ್ದಾರೆೆ. ಅಲ್ಲದೆ, ಭಾಷಣದುದ್ದಕ್ಕೂ ಧರ್ಮನಿಂದನೆ, ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಪ್ರಚೋದನಾತ್ಮಕ ಭಾಷಣದ ಮೂಲಕ ಪರಿಸರದ ಶಾಂತಿಗೆ ಭಂಗವುಂಟು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮ ಆಯೋಜಕ, ಬಜರಂಗದಳದ ಪ್ರಖಂಡ ಅಧ್ಯಕ್ಷ ಸುರೇಶ್ ಕೊಟ್ಟಾರಿ, ಚೇತನ್ ಪಿದಮಲೆ, ಭಾಸ್ಕರ್ ಟೈಲರ್ ಶೆಟ್ಟಿಗಾರ್, ವರದರಾಜ್ ಕೊಟ್ಟಾರಿ, ಕೃಷ್ಣಪ್ಪಸಾಲ್ಯಾನ್, ರಮೇಶ್ ಪೂಜಾರಿ ಎಂಬವರ ಮೇಲೂ ಪ್ರಕರಣ ದಾಖಲಿಸುವಂತೆ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News