ಅ.14ರಂದು ಮಂಗಳೂರಿನಲ್ಲಿ ಮಂಗಳಮುಖಿಯರ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ

Update: 2018-09-11 11:18 GMT

ಮಂಗಳೂರು, ಸೆ.11: ಪರಿವರ್ತನಾ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಪರಿವರ್ತನ ಮಂಗಳಮುಖಿಯರ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆ ಅಕ್ಟೋಬರ್ 14ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜರುಗಲಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೌಂದರ್ಯ ಸ್ಪರ್ಧೆಯ ಲೋಗೋವನ್ನು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಟ್ರಸ್ಟ್‌ನ ಸಂಸ್ಥಾಪಕಿ ವಾಯ್ಲೆಟ್ ಪಿರೇರ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಒಂದು ಹೊಸ ಪ್ರಯತ್ನಕ್ಕೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಕೈ ಹಾಕಿದ್ದು, ಸ್ಪರ್ಧೆಯಲ್ಲಿ ಮಂಗಳಮುಖಿಯರು ತಮ್ಮ ಸೌಂದರ್ಯ ಪ್ರದರ್ಶನದೊಂದಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ. ಸ್ಪರ್ಧೆಯು ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದು ಫ್ಯಾಷನ್ ಎಬಿಸಿಡಿ ಮತ್ತು ವಿ4 ಚಾನೆಲ್ ಸ್ಪರ್ಧೆಗೆ ಸಹಯೋಗ ನೀಡಲಿವೆ ಎಂದರು.

ಮಂಗಳಮುಖಿಯರ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ 2016ರಲ್ಲಿ ಆರಂಭಗೊಂಡ ಟ್ರಸ್ಟ್ ಮಂಗಳಮುಖಿಯರ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ಕಳೆದ ವರ್ಷ ಹರ್ಯಾಣದ ಗುರ್ಗಾಂವ್ ಪ್ರದೇಶದ ಮಂಗಳಮುಖಯೋರ್ವರು ಇತರ 16 ಸುಂದರಿಯರ ಮಧ್ಯ ಟ್ರಾನ್ಸ್ ಕ್ವಿನ್ ಇಂಡಿಯಾ ಆಗಿ ಆಯ್ಕೆಯಾಗಿದ್ದು ಇತಿಹಾಸವಾಗಿದ್ದು ಪ್ರಥಮವಾಗಿ ಓರ್ವ ಮಂಗಳಮುಖಿ ಗೆದ್ದು ಬಂದಿದ್ದರು. ಅದರ ಬಳಿಕ ಥಾಯ್ಲೆಂಡ್‌ನಲ್ಲಿ ಮಾರ್ಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶವನ್ನು ಪ್ರತಿನಿಧಿಸಿದ ಕೀರ್ತಿ ರೀನಾ ರೈಯವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿ4 ಸುದ್ದಿವಾಹಿನಿಯ ಲಕ್ಷ್ಮಣ್ ಕುಂದರ್, ಸಂಜನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News