ಬೆಳ್ತಂಗಡಿ: ಪ್ರತಿಭಟನಾ ನಿರತ ದಲಿತರ ಮೇಲೆ ಸುಳ್ಳು ಆರೋಪ

Update: 2018-09-11 11:27 GMT

ಮಂಗಳೂರು, ಸೆ.11: ಬೆಳ್ತಂಗಡಿಯಲ್ಲಿ ಇತ್ತೀಚೆಗೆ ದಲಿತ ಸಂಘಟನೆಗಳು ಒಟ್ಟು ಸೇರಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಸುಳ್ಳು ಆರೋಪ ಹೊರಿಸಿ ದೂರು ನೀಡುವ ಮೂಲಕ ದಲಿತರ ವಿರುದ್ಧ ಒಳಸಂಚು ನಡೆಸಲಾಗಿದೆ ಎಂದು ದಲಿತ ಸಂಘಟನೆಗಳ ನಾಯಕರು ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಅಂಬೇಡ್ಕರ್ ಫಾರಂ ಫಾರ್ ಸೋಶಿಯಲ್ ಜಸ್ಟಿಸ್, ಕರ್ನಾಟಕ ರಾಜ್ಯ ಆದಿದ್ರಾವಿಡ ಮಹಾಮಂಡಲ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಸ್‌ಸಿ ಘಟಕ, ಡಾ.ಬಿ.ಆರ್. ಅಂಬೇಡ್ಕರ್ ಸಮಾಜ ಸೇವಾ ಸಂಘ, ಬಂಟ್ವಾಳ ತಾಲೂಕು ನಲಿಕೆ ಸೇವಾ ಸಮಿತಿ ಮೊದಲಾದ ದಲಿತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಲಾಗಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟಿಸ್‌ನ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ, ಬೆಳ್ತಂಗಡಿಯಲ್ಲಿ ದಲಿತ ಸಂಘಟನೆಗಳು ಸೇರಿ ದೆಹಲಿಯಲ್ಲಿ ಹಿಂದೂ ಪರ ಯೂತ್ ಫಾರ್ ಈಕ್ವಲಿಟಿ ಸಂಘಟನೆಯವರು ನಮ್ಮ ದೇಶದ ಸಂವಿಧಾನದ ಪ್ರತಿಯನ್ನು ಸುಟ್ಟಿರುವ ಘಟನೆಯನ್ನು ಖಂಡಿಸಿ ಪ್ರತಿಭಟಿಸಿ ನಡೆಸಿದ್ದರು. ಪ್ರತಿಭಟನೆಯ ಸಂದರ್ಭ ಮನುಸ್ಮತಿಯನ್ನು ಸುಟ್ಟಿರುವುದನ್ನು ತಿರುಚಿ ಭಗವಾಧ್ವಜವನ್ನು ಸುಡಲಾಗಿದೆ ಎಂದು ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಹೊರಿಸಿ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿರುವುದು ದಲಿತರ ವಿರುದ್ಧ ಹಿಂದೂ ಸಮಾಜವನ್ನು ಎತ್ತಿಕಟ್ಟುವ ಉದ್ದೇಶದ್ದಾಗಿದೆ ಎಂದರು.

ದಲಿತರಿಗೆ ಮಾನವ ಸಹಜ ಬದುಕನ್ನು ನಿರಾಕರಣೆ ಆಡಿದ ಮನುಸ್ಮತಿಯನ್ನು ಸುಟ್ಟ ಮಾತ್ರಕ್ಕೆ ಸಂಘ ಪರಿವಾರದವರಿಗೆ ನೋವಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾದ ಅಧ್ಯಕ್ಷ ಚಿ.ನಾ.ರಾಮು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆವೇಶಭರಿತರಾಗಿ ಮಾತನಾಡಿದ್ದಾರೆ. ಆದರೆ ಬೆಳ್ತಂಗಡಿಯ ನಿಡ್ಲೆ ಗ್ರಾಮದ ಬೂಡುಜಾಲ್ ಎಂಬಲ್ಲಿ ಉಳ್ಳಾಲ್ತಿ ದೈವಸ್ತಾನದ ಬ್ರಹ್ಮಕಲಶದ ದಿನ ಸಾರ್ವಜನಿಕ ಅನ್ನ ಸಂತರ್ಪಣೆಯ ಚಪ್ಪರದಲ್ಲಿ ಸವರ್ಣಿಯರ ಜತೆ ಊಟಕ್ಕೆ ಕುಳಿತಿದ್ದ ದಲಿತ ಹೆಣ್ಣು ಮಕ್ಕಳನ್ನು ಹಿಡಿದೆಳೆದು ಹೊರದಬ್ಬಿ ಅವಮಾನಿಸಿದಾಗ ಇವರು ಯಾಕೆ ಮಾತನಾಡಿಲ್ಲ ಎಂದು ಅವರು ಪ್ರಶ್ನಿಸಿದರು.

ದಾನಮ್ಮ ಎಂಬ ದಲಿತ ಹೆಣ್ಣು ಮಗಳ ಸಾಮೂಹಿಕ ಅತ್ಯಾಚಾರ, ಕಂಬಾಲಪಲ್ಲಿಯಲ್ಲಿ ದಲಿತರನ್ನು ಸಾಮೂಹಿಕವಾಗಿ ಸಜೀವ ದಹನ ಮಾಡಿದಾಗ, ಗುಜರಾತಿನ ಉನಾ ಎಂಬಲ್ಲಿ ದಲಿತರು ಸತ್ತ ದನದ ಚರ್ಮ ಸುಲಿದರು ಎಂಬ ಕಾರಣಕ್ಕಾಗಿ ಹಿಂಸೆ ನೀಡಿದಾಗ, ಇತ್ತೀಚೆಗಷ್ಟೆ ಗುಜರಾತಿನಲ್ಲಿ ದಲಿತ ಹೆಣ್ಣು ಮಗಳ್ನನು ನಗ್ನಗೊಳಿಸಿ, ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡಿದಾಗ ಇವರೆಲ್ಲಾ ಯಾಕೆ ಮಾತನಾಡಿಲ್ಲ? ಇಂದು ಸಂಘ ಪರಿವಾರದ ಸಂಸ್ಕೃತಿಯೇ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಂಘ ಪರಿವಾರದವರು ಕೇಸರಿ ಬಣ್ಣದ ಪೇಟೆಂಟ್ ಪಡೆದವರ ಹಾಗೆ ಮಾತನಾಡಬೇಕಿಲ್ಲ. ಹಾಗೆ ಮಾತನಾಡಿದರೆ ಅದು ಅವರ ಜ್ಞಾನದ ಕೊರತೆ. ಇಸ್ಲಾಂನ ಸೂಫಿ ಸಮುದಾಯವರು ಕೂಡಾ ಕೇಸರಿ ವಸ್ತ್ರವನ್ನು ಧರಿಸುತ್ತಾರೆ. ಹಾಗಾಗಿ ಕೇಸರಿ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಅವರು ಭಾನುಚಂದ್ರ ಹೇಳಿದರು.

ದಲಿತರು ಭಯದಿಂದ ವಾಸಿಸುವ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ದಲಿತರನ್ನು ಹಿಂದೂಗಳಿಂದ ಪ್ರತ್ಯೇಕಿಸುವ ಒಳಸಂಚಿನ ಭಾಗವಾಗಿ ಪ್ರತಿಭಟನೆ ನಡೆಸಿದ ದಲಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಆದಿದ್ರಾವಿಡ ಮಹಾಮಂಡಲದ ಅಧ್ಯಕ್ಷ ರಾಜ ಪಲ್ಲಮಜಲು, ದ.ಕ. ಜಿಲ್ಲಾ ಕಾಂಗ್ರೆಸ್‌ನ ಎಸ್‌ಸಿ ಘಟಕದ ಉಪಾಧ್ಯಕ್ಷ ರಾಜೀವ ಕಕ್ಯಪದವು, ತುಂಬೆ ಸತ್ಯ ಸಾರಮಾನಿ ದೈವ ಸೇವಾ ಸಮಿತಿಯ ಗೌರವಾಧ್ಯಕ್ಷ ರಾಮ ಎಸ್. ತುಂಬೆ, ಡಾ.ಬಿ.ಆರ್.ಅಂಬೇಡ್ಕರ್ ಸಮಾಜ ಸೇವಾ ಸಂಘ ಬಡಗಬೆಳ್ಳೂರು ಘಟಕದ ಅಧ್ಯಕ್ಷ ಮೋಹನ ಬಡಗಬೆಳ್ಳೂರು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರ ವೀರಕಂಭ ಮೊದಲಾವದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News