ಕಿದಿಯೂರು ವೆಂಕಟ್ರಾವ್ ಸಂಸ್ಮರಣೆ: ವಿದ್ಯಾರ್ಥಿ ವೇತನ, ವೈದ್ಯಕೀಯ ನೆರವು ವಿತರಣೆ

Update: 2018-09-11 12:58 GMT

 ಉಡುಪಿ, ಸೆ.11: ಬಡತನ ಮಗುವಿನ ವಿದ್ಯಾರ್ಜನೆಗೆ ತೊಡಕಾಗಬಾರದು ಮತ್ತು ಮಗುವಿನ ಆತ್ಮಸ್ಥೈರ್ಯವನ್ನು ಕುಂದಿಸಬಾರದು. ಅಂತಹ ಮಗುವಿನ ಸರ್ವತೋಮುಖ ಪ್ರಗತಿಗೆ ನೆರವಾಗುವುದು ಉಳ್ಳವರ ಕರ್ತವ್ಯವಾಗಬೇಕು ಎಂಬ ವಿಚಾರಧಾರೆಯನ್ನು ಹಿರಿಯ ನ್ಯಾಯವಾದಿಯಾಗಿದ್ದ ದಿ.ವಿ.ಆರ್. ಕಿದಿಯೂರ್ ತನ್ನ ಗಳಿಕೆಯ ಹಣವನ್ನೆಲ್ಲಾ ತಾನೇ ಸ್ಥಾಪಿಸಿದ ಟ್ರಸ್ಟ್‌ಗೆ ಹಸ್ತಾಂತರಿಸಿ ಆ ಮೂಲಕ ಅರ್ಹ ಬಡ ಶಿಕ್ಷಣಾರ್ಥಿಗಳಿಗೆ ನೆರವಾಗುತಿದ್ದಾರೆ ಎಂದು ಉಡುಪಿಯ ಹಿರಿಯ ನ್ಯಾಯವಾದಿಗಳೂ, ವೆಂಕಟರಾವ್ ಕಿದಿಯೂರ್ ಅವರ ಮಿತ್ರರೂ ಆಗಿದ್ದ ಅಲೆವೂರು ಶ್ರೀಪತಿ ಆಚಾರ್ಯ ಹೇಳಿದ್ದಾರೆ.

ಇಲ್ಲಿ ನಡೆದ ದಿ. ವೆಂಕಟ್‌ರಾವ್ ಕಿದಿಯೂರ್ ಸಂಸ್ಮರಣೆ ಮತ್ತು ಅವರು ತಮ್ಮ ಹೆತ್ತವರು ಹಾಗೂ ಸಹೋದರನ ಸ್ಮರಣಾರ್ಥ 1990ರಲ್ಲಿ ಸ್ಥಾಪಿಸಿದ ಕಿದಿಯೂರು ನಾಗಲಕ್ಷ್ಮಿ ಶ್ರೀನಿವಾಸ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್‌ನ ಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶ್ರೀಪತಿ ಆಚಾರ್ಯ ಮಾತನಾಡುತಿದ್ದರು.

ವಿ.ಆರ್.ಕಿದಿಯೂರ್, ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತರ ವೈದ್ಯಕೀಯ ಶುಶ್ರೂಷೆಗೆ ನೆರವು ನೀಡುತ್ತಾ ಬಂದವರು. ತನ್ನ ಜೀವಿತಾವಧಿಯ ನಂತರವೂ ಟ್ರಸ್ಟ್ ಇದೇ ರೀತಿ ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ, ವೈದ್ಯಕೀಯ ಶುಶ್ರೂಷೆಗೆ, ಸಮಾಜಮುಖಿ ಕಾರ್ಯಕ್ರಮಗಳಿಗೆ ನೆರವು ನೀಡಬೇಕೆಂದು ಬಯಸಿದ್ದರು. ಅವರ ದೂರದರ್ಶಿತ್ವದ ಚಿಂತನೆ ಮತ್ತು ಸದುದ್ದೇಶವನ್ನು ಅವರ ಹಾಕಿಕೊಟ್ಟ ಮಾರ್ಗದಂತೆ ಮುಂದುವರಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಅತಿಥಿಗಳು ಆಯ್ದ ಫಲಾನುಭವಿಗಳಿಗೆ ಸುಮಾರು ಮೂರು ಲಕ್ಷ ರೂ. ವೌಲ್ಯದ ವಿದ್ಯಾರ್ಥಿ ವೇತನ ಮತ್ತು ವೈದ್ಯಕೀಯ ನೆರವನ್ನು ವಿತರಿಸಿದರು. ಟ್ರಸ್ಟಿನ ಅಧ್ಯಕ್ಷ ಬಿ.ಜಿ.ರಾವ್ ಅಧ್ಯಕ್ಷತೆ ವಹಿಸಿದ್ದರು.

ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಪ್ರೊ.ರಾಧಾಕೃಷ್ಣ ಆಚಾರ್ಯ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಸದಸ್ಯ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಯು.ಕೆ. ರಾಘವೇಂದ್ರ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News