‘ಭಾರತ್ ಬಂದ್’ ವೇಳೆ ಉಡುಪಿಯಲ್ಲಿ ಘರ್ಷಣೆ: ಏಳು ಪ್ರಕರಣ ದಾಖಲು; 10 ಮಂದಿ ಸೆರೆ

Update: 2018-09-11 14:49 GMT

ಉಡುಪಿ, ಸೆ.11: ಉಡುಪಿಯಲ್ಲಿ ಸೋಮವಾರ ಭಾರತ್ ಬಂದ್ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಸುಮಾರು 30-40 ಮಂದಿ ಕಾರ್ಯಕರ್ತರ ವಿರುದ್ಧ ಉಡುಪಿ ನಗರ, ಮಹಿಳಾ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣಗಳಿಗೆ ಸಂಬಂಧಿಸಿ ಘರ್ಷಣೆ ಹಾಗೂ ಲಾಠಿ ಚಾರ್ಜ್‌ಗಳಿಂದ ಗಾಯಗೊಂಡು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಒಂದು ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ.

ಸ್ವಯಂ ಪ್ರೇರಿತ ಪ್ರಕರಣಗಳು: ಬನ್ನಂಜೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡಿರುವುದಾಗಿ ಉಡುಪಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಕಲಂ: 143, 147, 290, 353 ಜೊತೆಗೆ 149 ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ಉಡುಪಿಯ ಎಸ್‌ಕೆಎಂ ಜಂಕ್ಷನ್ ಬಳಿಯ ಸಂಗಮ ವ್ಯವಹಾರ ಎಂಬ ಅಂಗಡಿ ಬಳಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಕ್ರಮ ಕೂಟ ಸೇರಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡಿರುವುದಾಗಿ ನಗರ ಎಸ್ಸೈ ಅನಂತ ಪದ್ಮನಾಭ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಕಲಂ:143, 147,149,290 ಜೊತೆಗೆ 149ಐಪಿಸಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ಮಣಿಪಾಲ ಟೈಗರ್ ಸರ್ಕಲ್ ಬಳಿ ಕಾಂಗ್ರೆಸ್ ಮುಖಂಡರು ರಿಕ್ಷಾ ಚಾಲಕರಿಗೆ ರಿಕ್ಷಾ ಬಂದ್ ಮಾಡುವಂತೆ ಒತ್ತಾಯಪಡಿಸಿ ದೊಂಬಿ ನಡೆಸುವ ಉದ್ದೇಶದಿಂದ ಸಾರ್ವಜನಿಕ ಶಾಂತಿ, ನೆಮ್ಮದಿಗೆ ಭಂಗವುಂಟು ಮಾಡಿರುವುದಾಗಿ ಮಣಿಪಾಲ ಎಸ್ಸೈ ಶ್ರೀಧರ ಎಂ.ಪಿ. ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಕಲಂ: 143, 147, 341 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಮಾರಣಾಂತಿಕ ಹಲ್ಲೆ ಪ್ರಕರಣ: ಬನ್ನಂಜೆಯಲ್ಲಿ ಬಿಜೆಪಿ ಕಾರ್ಯಕರ್ತ ಶಿವರಾಜ್ ಎಂಬವರಿಗೆ ಸುಮಾರು 25 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಹೋದಾಗ ಆರೋಪಿಗಳು ನನ್ನ ಕೈಯಲ್ಲಿದ್ದ ಪಕ್ಷದ ಬಾವುಟವನ್ನು ಕಾಲಿನಿಂದ ತುಳಿದು ಪ್ರಖ್ಯಾತ್ ಶೆಟ್ಟಿಯ ಕಾರಿನಲ್ಲಿದ್ದ ಅಪರಿಚಿತನೊಬ್ಬ ಕಬ್ಬಿಣದ ರಾಡ್‌ನಿಂದ ಕೊಲೆ ಮಾಡುವ ಉದ್ಧೇಶದಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವು ದಾಗಿ ಬಿಜೆಪಿ ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನಂಜೆ ಸರ್ಕಲ್ ಹತ್ತಿರ ಮಾರುತಿ ಓಮಿನಿ ಕಾರಿನಲ್ಲಿ ಬಂದ ಪ್ರಭಾಕರ ಪೂಜಾರಿ ಹಾಗೂ ಇತರ ಬಿಜೆಪಿ ಕಾರ್ಯಕರ್ತರು ಕಲ್ಲಿನಿಂದ ಮರಣಾಂತಿಕ ವಾಗಿ ತಲೆಗೆ ಹೊಡೆದುದಲ್ಲದೇ ಕಾಲಿನಿಂದ ಥಳಿಸಿ ಜೀವ ಬೆದರಿಕೆ ಹಾಕಿರುವು ದಾಗಿ ಕಾಂಗ್ರೆಸ್ ಕಾರ್ಯಕರ್ತ ಗೋಪಾಲ ಪೂಜಾರಿ ನೀಡಿದ ದೂರಿನಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇ ರೀತಿ ಬಲತ್ಕಾರದ ಬಂದ್ ಬಗ್ಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಕಲ್ಸಂಕದ ಜಯಾನಂದ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಮಂದಿಯ ಬಂಧನ: ಎಸ್ಪಿ

ಉಡುಪಿಯಲ್ಲಿ ಸೋಮವಾರದ ಭಾರತ್ ಬಂದ್ ಸಂದರ್ಭ ನಡೆದ ಘರ್ಷಣೆಗೆ ಸಂಬಂಧಿಸಿ 30-40 ಮಂದಿಯ ವಿರುದ್ಧ ಒಟ್ಟು 7 ಪ್ರಕರಣಗಳನ್ನು ದಾಖಲಿಸಿ, 10 ಮಂದಿಯನ್ನು ಬಂಧಿಸಲಾಗಿದೆ. ವಿಡಿಯೋ ಚಿತ್ರೀಕರಣವನ್ನು ಪರಿಶೀಲಿಸಿ ಗಲಾಟೆಯಲ್ಲಿ ಭಾಗಿಯಾಗಿರುವ ಇತರರನ್ನು ಕೂಡ ಬಂಧಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಪರಿಸ್ಥಿತಿ ಕೈಮೀರಿ ಹೋಗುವ ಅಪಾಯವನ್ನು ಅರಿತು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಬೇಕಾಯಿತು. ಇದೀಗ ಉಡುಪಿ ನಗರ ಶಾಂತವಾಗಿದ್ದು, ನಗರದಲ್ಲಿ ಎರಡು ಹಾಗೂ ಕುಂದಾಪುರದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿದೆ. ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಪರಿಸ್ಥಿತಿಯ ಅವಲೋಕನಕ್ಕಾಗಿ ಜಿಲ್ಲೆಗೆ ಆಗಮಿಸಿದ್ದಾರೆ ಎಂದು ಅವರು ಹೇಳಿದರು.

ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು

ಈ ಏಳು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರಾದ ಪ್ರಶಾಂತ್ ಪೂಜಾರಿ, ಯತೀಶ್ ಕರ್ಕೇರ, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಕೃಷ್ಣ ಹೆಬ್ಬಾರ್, ಶ್ರೀನಿವಾಸ ಹೆಬ್ಬಾರ್, ಹಬೀಬ್ ಅಲಿ, ಗಣೇಶ್ ನೆರ್ಗಿ, ಆರ್.ಕೆ.ರಮೇಶ್, ಪ್ರಖ್ಯಾತ್ ಶೆಟ್ಟಿ, ವಿಜಯ ಪೂಜಾರಿ, ಸುರೇಶ್ ಕುಂದರ್, ಶರತ್ ಭಂಡಾರಿ, ವಿನೋದ್ ಜತ್ತನ್ನ, ಮಂಜುನಾಥ, ಹರೀಶ್ ಕಿಣಿ, ಗೋಪಾಲ ಪೂಜಾರಿ, ಜನಾದರ್ನ ಭಂಡಾರ್ಕರ್, ಗಣೇಶ್ ದೊಡ್ಡಣಗುಡ್ಡೆ, ವಿಜಯ ಮಂಚಿ, ಶೇಖರ್ ಕೋಟ್ಯಾನ್, ಯೋಗೀಶ್, ಅರುಣ್ ಪೂಜಾರಿ, ದಿನೇಶ್ ಅಮೀನ್, ಗಿರೀಶ್ ಅಂಚನ್, ಶರತ್ ಮಡಿವಾಳ, ದಿನಕರ ಪೂಜಾರಿ, ಅನಿಲ್ ಮಡಿವಾಳ, ಗುರು ಶೇರಿಗಾರ್, ಕಿಶೋರ್ ಸಾಲಿಯಾನ್, ಶ್ರೀಶ ನಾಯ್ಕ, ದೀಕ್ಷಿತ್ ಶೆಟ್ಟಿಗಾರ್, ಶರತ್ ಬೈಲಕೆರೆ, ರಚನ್ ಮಲ್ಪೆ, ಹರೀಶ್ ಪೂಜಾರಿ ಪರ್ಕಳ, ದಿವಾಕರ ಪೂಜಾರಿ, ಶಿವರಾಜ್ ಅಂಚನ್, ರಮೇಶ ಪೂಜಾರಿ, ಅಲ್ವಿನ್, ಪ್ರಭಾಕರ ಪೂಜಾರಿ, ರಾಕೇಶ್ ಜೋಗಿ, ದಿನೇಶ್ ಅಮೀನ್, ಕಿಶೋರ್ ಸಲ್ಯಾನ್, ಶಿವರಾಜ್ ಕುಮಾರ್, ಮಂಜುನಾಥ ಕೊಳ ಎಂಬವರನ್ನು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News