ಖಾಸಗಿ ಶಾಲೆಗಳ ಹಾದಿಯಲ್ಲಿ ಸಾಗಿರುವ ಸರಕಾರಿ ಶಾಲೆ: ಉಡುಪಿ ಜಿಪಂ ಸಾಮಾನ್ಯ ಸಭೆ ಆಕ್ರೋಶ, ಕ್ರಮಕ್ಕೆ ಆಗ್ರಹ

Update: 2018-09-11 15:08 GMT

ಮಣಿಪಾಲ, ಸೆ.11: ಎಸೆಸೆಲ್ಸಿ ಪರೀಕ್ಷೆಯಲ್ಲಿ ತಮ್ಮ ಶಾಲೆಯ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಖಾಸಗಿ ಶಾಲೆಗಳು ಅನುಸರಿಸುತ್ತಿರುವ ಕೆಲವೊಂದು ಅಕ್ರಮ ಮಾರ್ಗಗಳನ್ನು ಸರಕಾರಿ ಶಾಲೆಯೂ ಅನುಸರಿಸಲು ಆರಂಭಿಸಿದ್ದು, ಕುಂದಾಪುರದ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ಅನುತ್ತೀರ್ಣ ರಾದ 19 ಮಂದಿ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಕಳುಹಿಸಿದ ಘಟನೆ ಇಂದು ನಡೆದ ಜಿಪಂನ 13ನೇ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ ಸದಸ್ಯರೆಲ್ಲರೂ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಸೋಮವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಸೆ.6ರಿಂದ ಮುಂದುವರಿದ 13ನೇ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ದಿನಕರಬಾಬು ಖುದಾ್ದಗಿ ಈ ವಿಷಯವನ್ನು ಪ್ರಸ್ತಾಪಿಸಿದರು.

ತಾನು ಈ ಬಗ್ಗೆ ಕುಂದಾಪುರ ಬೋರ್ಡ್ ಹೈಸ್ಕೂಲ್‌ಗೆ ಹೋಗಿ ಪರಿಶೀಲಿಸಿ ರುವುದಾಗಿ ಅವರು ಹೇಳಿದರಲ್ಲದೇ ಈ ಬಗ್ಗೆ ಡಿಡಿಪಿಐ ಹಾಗೂ ಬಿಇಒ ಅವರ ಸ್ಪಷ್ಟೀಕರಣವನ್ನು ಕೇಳಿದರು. ಇದೊಂದು ಅತ್ಯಂತ ದುರದೃಷ್ಟಕರ ನಡೆ. ಸರಕಾರಿ ಶಾಲೆಗಳೇ ಹೀಗೆ ಕಲಿಕೆಯಲ್ಲಿ ಹಿಂದಿದ್ದಾರೆಂದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವಕಾಶ ನಿರಾಕರಿಸಿದರೆ, ಅವರಿಗೆ ಮುಂದೆ ಬರಲು ಅವಕಾಶ ನೀಡುವವರು ಯಾರು ಎಂದು ಅವರು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಕೆಲವೊಂದು ಖ್ಯಾತ ಖಾಸಗಿ ಶಾಲೆಗಳು ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ಪಡೆಯಲು ಅನುಸರಿಸುವ ಕ್ರಮ ಇದಾಗಿದ್ದು, ಇದು ಸರಕಾರಿ ಶಾಲೆಯನ್ನೂ ಪ್ರವೇಶಿಸಿದರೆ ಅದಕ್ಕಿಂತ ಅನ್ಯಾಯ ಮತ್ತೊಂದಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು ಹಾಗೂ ಇದರ ವಿರುದ್ದ ಈಗಲೇ ಕಠಿಣ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೆಚ್ಚಿನೆಲ್ಲಾ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಲ್ಲದೇ ಇದಕ್ಕೆ ಕಾರಣರಾದ ಮುಖ್ಯೋಪಾಧ್ಯಾಯಿನಿ ವಿರುದ್ದ ಕ್ರಮ ಕೈಗೊಳ್ಳುವಂತೆ ಬಲವಾಗಿ ಆಗ್ರಹಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ ಅವರು ಸಹ ಈ ಬಗ್ಗೆ ತನ್ನ ತೀವ್ರವಾದ ಅಸಮಧಾನ ವ್ಯಕ್ತಪಡಿಸಿ, ಬಿಇಒರಿಂದ ಸಮಜಾಯಿಷಿ ಕೇಳಿದರು.

ಇದಕ್ಕೆ ಉತ್ತರಿಸಿದ ಕುಂದಾಪುರ ಬಿಇಒ ಅಶೋಕ್ ಕಾಮತ್, ಬೋರ್ಡ್ ಹೈಸ್ಕೂಲ್‌ನ 9ನೇ ತರಗತಿಯಲ್ಲಿ 19 ಮಂದಿ ವಿದ್ಯಾರ್ಥಿಗಳು ಫೇಲ್ ಆಗಿದ್ದು, ಇವರಿಗೆ ನಡೆಸಿದ ಮರು ಪರೀಕ್ಷೆಗೆ 7 ಮಂದಿ ಗೈರುಹಾಜರಾಗಿದ್ದರು. ಮೂವರು ವಿದ್ಯಾರ್ಥಿಗಳು ಸ್ವಯಂ ಆಗಿ ಟಿಪಿ ಪಡೆದು ಹೋಗಿದ್ದಾರೆ. ಇನ್ನು 5-6 ಮಂದಿ ಅಲ್ಲೇ 9ನೇ ತರಗತಿಯಲ್ಲಿ ಕಲಿಕೆಯನ್ನು ಮುಂದುವರಿಸಿದ್ದಾರೆ ಎಂದರು.

ಬಿಜೆಪಿ ಸದಸ್ಯರಾದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಹಾಗೂ ರಾಘವೇಂದ್ರ ಕಾಂಚನ್ ಮಾತನಾಡಿ, ಅಲ್ಲಿನ ಮುಖ್ಯೋಪಾಧ್ಯಾಯಿನಿಯ ವರ್ತನೆಯೇ ಸರಿ ಇಲ್ಲ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಸರಕಾರಿ ಇಲಾಖೆಯ ಅಧಿಕಾರಿಯ ಮಗನನ್ನೇ ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿ ಸಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗೆ ಟಿಸಿ ಕೊಟ್ಟು ಮನೆಗೆ ಕಳುಹಿಸುತ್ತಾರೆ ಎಂದು ವಿವರಿಸಿದರು.

ಹೀಗಾದರೆ ಸರಕಾರಿ ಶಾಲೆಗೆ ಕಲಿಯಲು ಬರುವ ಬಡ ಹಾಗೂ ಹಿಂದುಳಿದ ಸಮಾಜದ ಮಕ್ಕಳ ಗತಿಯೇನು. ಅವರಿಗೆ ಬೇರೆ ಎಲ್ಲಿ ಶಿಕ್ಷಣಕ್ಕೆ ಅವಕಾಶ ಸಿಗುತ್ತದೆ. ಇದನ್ನು ಈಗಲೇ ಸರಿಪಡಿಸದಿದ್ದರೆ, ಉಳಿದ ಸರಕಾರಿ ಶಾಲೆಗಳಿಗೂ ಹಬ್ಬಬಹುದು ಎಂದು ಈ ಘಟನೆಯನ್ನು ಖಂಡಿಸಿ ಮಾತನಾಡಿದ ಸದಸ್ಯರು ಕಳವಳ ವ್ಯಕ್ತಪಡಿಸಿದರು.

ಈ ಕುರಿತು ವಿವರವಾದ ವರದಿಯೊಂದನ್ನು ಒಂದು ವಾರದೊಳಗೆ ತನಗೆ ನೀಡುವಂತೆ ಸಿಇಒ ಅವರು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿ ದರು.

ಪ್ರಸ್ತಾಪವಾದ ಹಾರುಬೂದಿ ಪ್ರಕರಣ

ಉಡುಪಿಯಲ್ಲಿ ಇತ್ತೀಚೆಗೆ ಸುರಿದ ಬೂದಿ ಮಿಶ್ರಿತ ಮಳೆ ಕುರಿತಂತೆ ಎನ್‌ಐಟಿಕೆ ವರದಿ ನೀಡಿದ್ದು, ಈ ಮಳೆಯ ಕುರಿತಂತೆ ಪರಿಸರ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ವಿಧಾನ ಪರಿಷತ್ ಶಾಸಕ ಪ್ರತಾಪಚಂದ್ರ ಶೆಟ್ಟಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಉಡುಪಿಯಲ್ಲಿ ಪ್ರಥಮ ಬಾರಿಗೆ ಇಂತಹ ಮಳೆ ಆಗಿದ್ದು, ಈ ಕುರಿತು ಎನ್‌ಐಟಿಕೆ ತಜ್ಞರು ನೀಡಿರುವ ವರದಿಯಲ್ಲಿ ಬೂದಿ ಅಂಶ ಮಿಶ್ರಿತ ಎಂದು ನಮೂದಿಸಿದ್ದಾರೆ. ಆದರೆ ಅದು ಹಾರು ಬೂದಿ ಎಂದು ನಮೂದಿಸಿಲ್ಲ. ಈ ವರದಿಯನ್ನು ಬೆಂಗಳೂರಿನ ಕೇಂದ್ರ ಪರಿಸರ ಮಂಡಳಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಬೆಂಗಳೂರಿನಿಂದ ವರದಿ ಬಂದ ನಂತರ ಅದರ ಪ್ರತಿಯನ್ನು ತನಗೆ ನೀಡುವಂತೆ ಶಾಸಕರು ಹೇಳಿದರು.

ಇದಕ್ಕೆ ಉತ್ತರಿಸಿದ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್, ಉಡುಪಿಯಲ್ಲಿ ಪ್ರಥಮ ಬಾರಿಗೆ ಇಂತಹ ಮಳೆ ಆಗಿದ್ದು, ಈ ಕುರಿತು ಎನ್‌ಐಟಿಕೆ ತಜ್ಞರು ನೀಡಿರುವ ವರದಿಯಲ್ಲಿ ಬೂದಿ ಅಂಶ ಮಿಶ್ರಿತ ಎಂದು ನಮೂದಿಸಿದ್ದಾರೆ. ಆದರೆ ಅದು ಹಾರು ಬೂದಿ ಎಂದು ನಮೂದಿಸಿಲ್ಲ. ಈ ವರದಿಯನ್ನು ಬೆಂಗಳೂರಿನ ಕೇಂದ್ರ ಪರಿಸರ ಮಂಡಳಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. ಬೆಂಗಳೂರಿನಿಂದ ವರದಿ ಬಂದ ನಂತರ ಅದರ ಪ್ರತಿಯನ್ನು ತನಗೆ ನೀಡುವಂತೆ ಶಾಸಕರು ಹೇಳಿದರು. ತಿನ್ನುವ ಆಹಾರ ವ್ಯರ್ಥಗೊಳಿಸಬೇಡಿ: ಅಕ್ಷರ ದಾಸೋಹ ಕಾರ್ಯಕ್ರಮ ದಡಿ ಶಾಲೆಗಳಿಗೆ ಸರಬರಾಜು ಮಾಡುವ ಆಹಾರ ಸಾಮಗ್ರಿಗಳು ಹಾಳಾಗದಂತೆ ಎಚ್ಚರವಹಿಸುವಂತೆ ದಿನಕರಬಾಬು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸೂಚಿಸಿದರು.

ಅಕ್ಷರ ದಾಸೋಹ ಕಾರ್ಯಕ್ರಮ ದಡಿ ಶಾಲೆಗಳಿಗೆ ಸರಬರಾಜು ಮಾಡುವ ಆಹಾರ ಸಾಮಗ್ರಿಗಳು ಹಾಳಾಗದಂತೆ ಎಚ್ಚರವಹಿಸುವಂತೆ ದಿನಕರಬಾಬು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸೂಚಿಸಿದರು. ಅಕ್ಷರ ದಾಸೋಹ ಯೋಜನೆಯಡಿ ಹಲವು ಶಾಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸಾಮಾಗ್ರಿಗಳು ದಾಸ್ತಾನು ಆಗುತ್ತಿದ್ದು, ಈ ವಸ್ತುಗಳು ಸಕಾಲದಲ್ಲಿ ಬಳಕೆಯಾಗದ ಕಾರಣ ಹಾಳಾಗುತ್ತಿವೆ. ಎಲ್ಲಾ ಶಾಲೆಗಳು ತಮ್ಮ ಅಗತ್ಯಕ್ಕೆ ಬೇಕಷ್ಟೇ ಸಾಮಗ್ರಿಗಳನ್ನು ಪಡೆಯುವಂತೆ ಸೂಚಿಸಿದ ದಿನಕರಬಾಬು, ಈ ಬಗ್ಗೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡುವಂತೆ ಡಿಡಿಪಿಐಗೆ ಸೂಚಿಸಿದರು.

ಕೆಲವು ಶಾಲೆಗಳಿಗೆ ಸರಬರಾಜು ಮಾಡಿರುವ ಹಾಲಿನ ಪುಡಿಯ ಪ್ಯಾಕೇಟ್‌ಗಳು ಒಡೆದು ಹೋಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಸದಸ್ಯೆ ಜ್ಯೋತಿ ಕೋರಿದ್ದು, ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ, ಒಡೆದು ಹೋದ ಪ್ಯಾಕೆಟ್‌ಗಳನ್ನು ಸ್ವೀಕರಿಸದಂತೆ ಎಲ್ಲಾ ಶಾಲೆಗಳಿಗೆ ಈಗಾಗಲೇ ಸೂಚಿಸಲಾಗಿದೆ. ಅಕ್ಷರ ದಾಸೋಹದ ಸಾಮಗ್ರಿಗಳ ಪ್ಯಾಕೇಟ್‌ಗಳನ್ನು ಸ್ವೀಕರಿಸಿದ ನಂತರ ಅದರ ಜವಾಬ್ದಾರಿ ಶಾಲೆಯ ಮುಖ್ಯ ಶಿಕ್ಷಕರದ್ದಾಗಿದೆ. ಅವು ಹಾಳಾಗದಂತೆ ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು ಎಂದರು.

ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ವಲಯ ಮಟ್ಟಕ್ಕೆ ಗೈರುಹಾಜರಾಗುತ್ತಿದ್ದು, ಈ ಕುರಿತಂತೆ ಬಿಇಓಗಳಿಂದ ಮಾಹಿತಿ ಪಡೆದು 2 ವಾರದಲ್ಲಿ ವರದಿ ನೀಡುವಂತೆ ಡಿಡಿಪಿಐಗೆ ದಿನಕರಬಾಬು ಹೇಳಿದರು.

ವಿದ್ಯಾಸಿರಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನ ಮುಗಿದಿದ್ದು, ತಾಂತ್ರಿಕ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಯೋಜನೆಯಿಂದ ವಂಚಿತ ರಾಗಿದ್ದಾರೆ. ಅರ್ಜಿ ಸಲ್ಲಿಸುವ ಕಡೆ ದಿನವನ್ನು ವಿಸ್ತರಿಸುವಂತೆ ಶಿಲ್ಪಾಸುವರ್ಣ ಸಭೆಯ ಗಮನ ಸೆಳೆದರು. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಬಾಕಿ ಇರುವ ಪಡಿತರ ಚೀಟಿ ವಿತರಣೆ ಕುರಿತಂತೆ ಸದಸ್ಯ ಜನಾರ್ದನ ತೋನ್ಸೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಎಸ್.ಆರ್.ಭಟ್, ಜಿಲ್ಲೆಯಲ್ಲಿ 7513 ಪಡಿತರ ಚೀಟಿ ವಿತರಣೆಗೆ ಬಾಕಿ ಇದ್ದು, ಅರ್ಜಿದಾರರ ಸ್ಥಳ ಪರಿಶೀಲನೆ ನಡೆಸಿ ಕಾರ್ಡ್‌ಗಳನ್ನು ವಿತರಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಪಾದೂರು ಐಎಸ್‌ಪಿಆರ್‌ಎಲ್ ಯೋಜನೆಯ ಕಾಮಗಾರಿ ವೇಳೆ ಬಂಡೆ ಸ್ಪೋಟದಿಂದ ಹಾನಿಯಾದ 150 ಮನೆಗಳಿಗೆ ಪರಿಹಾರ ನೀಡುವ ಕುರಿತಂತೆ ಈವರೆಗೂ ಯಾವುದೇ ಆದೇಶ ಪಾಲನೆಯಾಗದ ಕುರಿತು ಶಿಲ್ಪಾ ಸುವರ್ಣ ಪ್ರಶ್ನೆ ಎತ್ತಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.

ಗಂಗೊಳ್ಳಿ ಬಂದರುಕಟ್ಟೆ ನಿರ್ಮಾಣಕ್ಕೆ ದುಂಡಿಕಲ್ಲನ್ನು ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದು, ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೇ ಸರಕಾರ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಸದಸ್ಯ ಬಾಬು ಶೆಟ್ಟಿ ಹಾಗೂ ಪ್ರತಾಪ್ ಹೆಗ್ಡೆ ಮಾರಾಳಿ ದೂರಿದರು. ಇದರಲ್ಲಿ 2016ರಿಂದ ಈವರೆಗೆ ಎಷ್ಟು ಲೋಡು ಸಾಗಾಟ ಆಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಶಿರೂರು ಗ್ರಾಮದ ಅಳವೆಗದ್ದೆಯಲ್ಲಿ ನಿರ್ಮಾಣವಾಗಿರುವ ಮೀನುಗಾರಿಕಾ ಜೆಟ್ಟಿಯ ಕಾಮಗಾರಿ ಕುರಿತಂತೆ ಬಟವಾಡೆ ಸುರೇಶ್ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಈ ಕುರಿತು ಸುರ್ಧೀರ್ಘ ಚರ್ಚೆ ನಡೆದು ಕೊನೆಗೆ ಲೋಕೋಪಯೋಗಿ ಇಲಾಖೆ ಸಹಕಾರದಿಂದ ಕೃಷಿ ಸ್ಥಾಯಿ ಸಮಿತಿಯಿಂದ ತನಿಖೆ ನಡೆಸಲು ಸಭೆ ನಿರ್ಧರಿಸಿತು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೆ. ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ, ಉದಯ ಎಸ್ ಕೋಟ್ಯಾನ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾ ಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News