ಟ್ರಕ್ ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣ: ಪಣಂಬೂರು ಠಾಣೆಯಲ್ಲಿ ನ್ಯಾಯ ವಿಳಂಬ ಆರೋಪ

Update: 2018-09-11 15:17 GMT
ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೂಗಿನ ಶಸ್ತ್ರಚಿಕಿತ್ಸೆಗೊಳಗಾದ ಶೌಕತ್

ಮಂಗಳೂರು, ಸೆ.11: ಟ್ರಕ್ ನಿರ್ವಾಹಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಆರೋಪಿಗಳ ಬಂಧನ ವಾಗಿಲ್ಲ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ನ್ಯಾಯ ವಿಳಂಬವಾಗಿದೆ ಎಂದು ಹಲ್ಲೆ ಸಂತ್ರಸ್ತ ಶೌಕತ್ ಕುಟುಂಬದವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸೆ. 7ರಂದು ಪಣಂಬೂರಿನಲ್ಲಿ ವಾಹನ ಜಪ್ತಿ ಮಾಡುವವರು ತಮ್ಮ ಪುತ್ರ ಶೌಕತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಮುಖದ ಮೇಲಾದ ಹಲ್ಲೆಯಿಂದ ಮುರಿತಕ್ಕೊಳಗಾದ ಮೂಗಿನ ಶಸ್ತ್ರ ಚಿಕಿತ್ಸೆ ನಡೆದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಆದರೆ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿಲ್ಲ. ಮಾತ್ರವಲ್ಲದೆ, ಹಲ್ಲೆ ನಡೆದು ನಾಲ್ಕು ದಿನಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಆರೋಪಿಗಳನ್ನು ಕೂಡಲೇ ಬಂಧಿಸಿ ತಮಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಯುಕ್ತರಲ್ಲಿ ಮನವಿ ಮಾಡಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂತ್ರಸ್ತ ಶೌಕತ್‌ನ ತಾಯಿ ತಾಹಿರಾ ಬಾನು ಮತ್ತು ಹುಸೈನ್ ಇದ್ದರು.

ಸೆ.7ರಂದು ಪಣಂಬೂರಿನಲ್ಲಿ ನಡೆದಿತ್ತು ಹಲ್ಲೆ

ಸೆ.7ರಂದು ಕೇರಳಕ್ಕೆ ಮೀನು ಸಾಗಿಸಿ ಮಲ್ಪೆಗೆ ಹೊರಟಿದ್ದ ಟ್ರಕ್ ಕೋಲ್‌ನಾಡು ಸಮೀಪಿಸುತ್ತಿತ್ತು. ಈ ವೇಳೆ ಮಲ್ಪೆಯ ಮುರುಗಪ್ಪ ಗ್ರೂಪ್‌ನ ಚೋಳಮಂಡಲಂ ಫೈನಾನ್ಸ್‌ನ ನಾಲ್ವರು ವಾಹನ ಜಪ್ತಿ ಮಾಡುವವರು ಎರಡು ಕಾರುಗಳಲ್ಲಿ ಬಂದು ವಾಹನವನ್ನು ಅಡ್ಡಗಟ್ಟಿದ್ದರು. ಮೀನಿನ ಟ್ರಕ್‌ನ ಲೋನ್ ಕಂತು ಬಾಕಿಯಿದ್ದು, ವಾಹನ ಜಪ್ತಿ ಮಾಡಲಾಗುವುದು ಎಂದು ಹೇಳಿ ಟ್ರಕ್‌ನ್ನು ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಪಣಂಬೂರು ಬಳಿ ಡಿಸೇಲ್ ಖಾಲಿಯಾಗಿದೆ ಎಂದು ಹೇಳಿ ವಾಹನ ನಿಲ್ಲಿಸಿದ್ದರು. ಬಳಿಕ ಡಿಸೇಲ್ ಟ್ಯಾಂಕ್‌ನ ಬೀಗದಿಂದ ಟ್ರಕ್ ನಿರ್ವಾಹಕ ಹಾಗೂ ಪಡುಬಿದ್ರೆ ಪಾಲಿಮಾರು ನಿವಾಸಿ ಶೌಕತ್ ಮೂಗಿಗೆ ಬಲವಾಗಿ ಹೊಡೆದು, ಎಳೆದೊಯ್ದು ಕಾರಿಗೆ ದೂಡಿದ್ದಾರೆ. ಈ ವೇಳೆ ಟ್ರಕ್ ಚಾಲಕ ರಾಜೇಶ್ ಪ್ರಾಣಭಯದಿಂದ ಹೆದರಿ ಪರಾರಿಯಾಗಿದ್ದರು.

ಆನಂತರ ಶೌಕತ್‌ ರನ್ನು ನಿಂದಿಸಿ, ಕೊಲ್ಲುವ ಉದ್ದೇಶದಿಂದ ಮರದ ತುಂಡು, ಕಬ್ಬಿಣದ ರಾಡ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಶೌಕತ್ ಮೂಗಿಗೆ ಬಲವಾಗಿ ಬಿದ್ದ ಹೊಡೆತದಿಂದ ರಕ್ತಸ್ರಾವವಾಗಿತ್ತು. ಬಳಿಕ ಹಲ್ಲೆ ನಡೆಸಿದ ಆರೋಪಿಗಳೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶೌಕತ್‌ನನ್ನು ದಾಖಲಿಸಿ, ಪರಾರಿಯಾಗಿದ್ದರು.ಗಾಯಾಳು ಶೌಕತ್‌ನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು.

ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News