ನಳಿನ್, ಆಸ್ಕರ್ ಜೊತೆ ಕೊಂಕಣ ರೈಲ್ವೆ ಅಧಿಕಾರಿಗಳ ಚರ್ಚೆ

Update: 2018-09-11 15:24 GMT

ಉಡುಪಿ, ಸೆ.11: ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಸೂಚನೆಯಂತೆ ಕೊಂಕಣ ರೈಲ್ವೆ ಅಧಿಕಾರಿಗಳು ಮಂಗಳವಾರ ರಾಜ್ಯಸಭಾ ಸದಸ್ಯ ಉಡುಪಿಯ ಆಸ್ಕರ್ ಫೆರ್ನಾಂಡೀಸ್ ಹಾಗೂ ಮಂಗಳೂರಿನ ಸಂಸತ್ ಸದಸ್ಯ ನಳಿನ್‌ಕುಮಾರ್ ಕಟೀಲ್ ಅವರೊಂದಿಗೆ ರಾಜ್ಯ ಕರಾವಳಿಯಲ್ಲಿ ಕೊಂಕಣ ರೈಲ್ವೆಯಿಂದ ಆಗ ಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.

ಚರ್ಚೆಯ ಅವಧಿಯಲ್ಲಿ ಸಂಸದ್ ಸದಸ್ಯರಾದ ಆಸ್ಕರ್ ಫೆರ್ನಾಂಡೀಸ್ ಹಾಗೂ ನಳಿನ್‌ಕುಮಾರ್ ಕಟೀಲ್ ಅವರು ಕೊಂಕಣ ರೈಲ್ವೆಯಿಂದ ಕರಾವಳಿ ಭಾಗದಲ್ಲಿ ಆರಂಭಿಸಬೇಕಿರುವ ಹೊಸ ರೈಲುಗಳ ಕುರಿತು, ಈ ಭಾಗದ ಅಭಿವೃದ್ಧಿ ಚಟುವಟಿಕೆಗಳು, ರೈಲು ಪ್ರಯಾಣಿಕರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಹಾಗೂ ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಚತೆಗೆ ಸಿಗಬೇಕಾಗಿರುವ ಆದ್ಯತೆಗಳ ಕುರಿತು ಚರ್ಚೆ ನಡೆಸಿದರೆಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಆಸ್ಕರ್ ಫೆರ್ನಾಂಡೀಸ್ ಹಾಗೂ ನಳಿನ್‌ಕುಮಾರ್ ಕಟೀಲ್ ಅವರನ್ನು ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ್ ಗುಪ್ತಾ ಅವರು ಸ್ವಾಗತಿಸಿದರು.

ರೈಲ್ವೆ ಸೇವೆಯಲ್ಲಿ ಆಗಬೇಕಾಗಿರುವ ಬದಲಾವಣೆ, ದೇಶದ ರೈಲು ಪ್ರಯಾಣಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ದೊರೆಯಬೇಕೆನ್ನುವ ದೂರದೃಷ್ಟಿ ಯೋಜನೆಗಳನ್ನು ಹೊಂದಿರುವ ಸಚಿವ ಪಿಯೂಸ್ ಗೋಯಲ್ ಅವರು ಕೊಂಕಣ ರೈಲ್ವೆ ಮಾರ್ಗದಲ್ಲಿ ಬರುವ ಎಲ್ಲಾ ಸಂಸತ್ ಸದಸ್ಯರನ್ನು ಕರೆದು ಅವರ ಅಭಿಪ್ರಾಯ, ಸಲಹೆಗಳನ್ನು ಪಡೆಯುವಂತೆ ಸೂಚಿಸಿದ್ದು, ಅದರಂತೆ ಕರ್ನಾಟಕದ ಉಡುಪಿಯನ್ನು ಪ್ರತಿನಿಧಿಸುತ್ತಿರುವ ಆಸ್ಕರ್ ಫೆರ್ನಾಂಡೀಸ್ ಹಾಗೂ ಮಂಗಳೂರನ್ನು ಪ್ರತಿನಿಧಿಸುತ್ತಿರುವ ನಳಿನ್‌ಕುಮಾರ್ ಕಟೀಲ್‌ರನ್ನು ಕರೆಸಿ ಚರ್ಚಿಸಲಾಗಿದೆ ಎಂದು ಕೊಂಕಣ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ.ವರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News