ಸ್ವಯಂಪ್ರೇರಿತ ಬಂದ್‌ಗೆ ಬಿಜೆಪಿಯಿಂದ ತಡೆ: ಕಾಂಗ್ರೆಸ್ ಆರೋಪ

Update: 2018-09-11 15:29 GMT

ಉಡುಪಿ, ಸೆ.11: ಬೆಲೆ ಏರಿಕೆಯಿಂದ ಬೇಸತ್ತು ಉಡುಪಿಯ ಜನತೆ ಭಾರತ ಬಂದ್‌ಗೆ ಸ್ಪಂದಿಸಿದ್ದರು. ಹೀಗಾಗಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಬಿಜೆಪಿ ಕಾರ್ಯಕರ್ತರು ಒತ್ತಾಯ ಪೂರ್ವಕವಾಗಿ ತೆರೆಯುವಂತೆ ಮಾಡಿದ್ದೆ ಭಾರತ್ ಬಂದ್ ಪ್ರತಿಭಟನೆಯ ಸಮಯ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ನಿನ್ನೆ ಭಾರತ ಬಂದ್ ವೇಳೆ ಉಡುಪಿ ನಗರದಲ್ಲಿ ಸಂಬಂಧಿಸಿದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡಿದ ಕಾಂಗ್ರೆಸ್, ಪಕ್ಷ ಎಂದೂ ಹಿಂಸೆಗೆ ಪ್ರಚೋದನೆ ನೀಡುವ ಕೆಲಸ ಮಾಡಿದ ಉದಾಹಣೆ ಇಲ್ಲ. ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ವಿರುದ್ದ ಭಾರತ್ ಬಂದ್‌ಗೆ ಕರೆ ನೀಡಿದ್ದು, ಅದರ ಪ್ರಯುಕ್ತ ಜಿಲ್ಲೆಯಲ್ಲೂ ಕೂಡ ನಾಗರಿಕರಿಂದ ಉತ್ತಮವಾದ ಬೆಂಬಲ ವ್ಯಕ್ತವಾಗಿತ್ತು ಎಂದಿದೆ.

ಭಾರತ್ ಬಂದ್ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನವಿ ಮೂಲಕ ಸ್ವಯಂಪ್ರೇರಿತ ಬಂದ್ ಮಾಡುವಂತೆ ವಿನಂತಿಸಿ ಕೊಳ್ಳುತ್ತಿರುವಾಗ ಪೂರ್ವಯೋಜಿತ ರೀತಿಯಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪು ಏಕಾಏಕಿ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಉದ್ದೇಶ ಪೂರ್ವಕ ವಾಗಿದೆ. ಬಂದ್‌ನ್ನು ವಿಫಲಗೊಳಿಸಲು ಪೂರ್ವ ತಯಾರಿ ನಡೆಸಿ ಬಂದ ಬಿಜೆಪಿ ಕಾರ್ಯಕರ್ತರನ್ನು ಪೋಲಿಸರು ಚದುರಿಸುವ ಬದಲು ಜನಪ್ರತಿನಿಧಿಗಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆಯೇ ಏಕಾಏಕಿ ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಬಿಜೆಪಿ ಪ್ರತಿಭಟನೆ ಹಾಗೂ ಬಂದ್‌ಗಳಿಗೆ ಕರೆ ನೀಡಿತ್ತು. ಆದರೆ ಕಾಂಗ್ರೆಸ್ ಎಂದೂ ಪೂರ್ವ ತಯಾರಿಯೊಂದಿಗೆ ಬೆನ್ನಟ್ಟಿ ಬಂದು ವಿಫಲಗೊಳಿಸಲು ಪ್ರಯತ್ನಿಸಿಲ್ಲ. ಉದ್ದೇಶ ಪೂರ್ವಕವಾಗಿ ಬೆನ್ನಟ್ಟಿ ಬಂದು ಬಂದ್‌ಅನ್ನು ವಿಫಲಗೊಳಿಸುವ ಬಿಜೆಪಿ ನಡೆ ಜಿಲ್ಲೆಯ ಪ್ರತಿಭಟನೆಯ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಂತಾಗಿದೆ. ಬಿಜೆಪಿ ಮುಖಂಡರು ಬಂದ್‌ಅನ್ನು ವಿಫಲಗೊಳಿಸಲು ಆರಂಭದಿಂದಲೇ ಷಡ್ಯಂತ್ರವನ್ನು ರೂಪಿಸಿದ್ದರೂ ಜನತೆ ಬಂದನ್ನು ಯಶಸ್ವಿಗೊಳಿಸಿದ್ದಾರೆ ಎಂದು ಕಾಂಗ್ರೆಸ್‌ನ ಹೇಳಿಕೆಯಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News