ಕೆಎಸ್ಸಾರ್ಟಿಸಿ 'ಅದಾಲತ್'ಗೆ ಸದಸ್ಯರನ್ನು ಕರೆಯದೆ ಕಡೆಗಣನೆ ಆರೋಪ

Update: 2018-09-11 16:21 GMT

ಪುತ್ತೂರು, ಸೆ. 11: ವಿಭಾಗೀಯ ಮಟ್ಟದ ಕೆಎಸ್ಸಾರ್ಟಿಸಿ ಸಭೆ ಕಳೆದ ತಿಂಗಳು ಪುತ್ತೂರು ಶಾಸಕರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಇದಕ್ಕೆ ತಾಲೂಕು ಪಂಚಾಯತ್ ಸದಸ್ಯರನ್ನು ಕರೆಯದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶಗೊಂಡು ಕೆಎಸ್ಸಾರ್ಟಿಸಿ ವ್ಯವಸ್ಥಾಪಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ ಈ ಬಗ್ಗೆ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. 

ತಾಲೂಕು ಪಂಚಾಯತ್ ಸಾಮಾನ್ಯ ಸಭೆ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. 

ವಿಭಾಗೀಯ ಮಟ್ಟದ ಕೆಎಸ್ಸಾರ್ಟಿಸಿ ಅದಾಲತ್ ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್ ನಲ್ಲಿ ನಡೆದಿತ್ತು. ಇದಕ್ಕೆ ನೆಲ್ಯಾಡಿ ಹಾಗೂ ಕಡಬ ಭಾಗದ ತಾಲೂಕು ಪಂಚಾಯತ್ ಸದಸ್ಯರನ್ನು ಆಹ್ವಾನಿಸದೆ ಕಡಗಣನೆ ಮಾಡಲಾಗಿದೆ ಎಂದು ತಾಪಂ ಸದಸ್ಯರಾದ ಉಷಾ ಅಂಚನ್, ಆಶಾ ಲಕ್ಷಣ್, ಕೆ.ಟಿ ವಲ್ಸಮ್ಮ, ಫಝಲ್ ಕಡಬ, ಪೌಝಿಯಾ ನೆಟ್ಟಣಿಗೆಮುಡ್ನೂರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ಇದಕ್ಕೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಅವರು ಧ್ವನಿಗೂಡಿಸಿದರು. 

ಸುಮಾರು 45 ನಿಮಿಷ ಕಲಾಪವನ್ನು ನುಂಗಿದ ಈ ಚರ್ಚೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರು ಕೆಎಸ್ಸಾರ್ಟಿಸಿ ಇಲಾಖೆಯಿಂದ ಸದಸ್ಯರಿಗೆ ಅವಮಾನ ಮಾಡಲಾಗಿದೆ. ನಾವೇನು ನಮ್ಮ ಸ್ವಂತ ಸಮಸ್ಯೆ ಹೇಳಲು ಬಂದವರಲ್ಲ. ಜನತೆ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದೇವೆ. ಕೆಎಸ್ಸಾರ್ಟಿಸಿ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲು 'ಪಟ್ಟು' ಹಿಡಿದರು.

ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಸಭೆಗೆ ಸದಸ್ಯರನ್ನು ಕರೆಯುವುದು ಕೆಎಸ್ಸಾರ್ಟಿಸಿ ಇಲಾಖೆಯ ಜವಾಬ್ದಾರಿ. ಅವರು ತಪ್ಪು ಮಾಡಿದ್ದಾರೆ ಎಂದರು.

ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಇದು ಪುತ್ತೂರು ವಿಧಾನಸಭಾ ವ್ಯಾಪ್ತಿಯವರಿಗೆ ಮಾತ್ರ ಅನ್ವಯವಾಗುವ ಸಭೆ ಆಗಿತ್ತು ಎಂದು ಹೇಳಿದಾಗ ಮತ್ತೊಮ್ಮೆ ನೆಲ್ಯಾಡಿ ಹಾಗೂ ಕಡಬ ಭಾಗದ ಸದಸ್ಯರು ಆಕ್ರೋಶಗೊಂಡರು. ನಾವೂ ಪುತ್ತೂರು ತಾಲೂಕು ಪಂಚಾಯತ್ ಸದಸ್ಯರಾಗಿದ್ದೇವೆ. ಶಾಸಕರ ನೇತೃತ್ವದಲ್ಲಿ ನಡೆದಿರುವುದು ವಿಭಾಗೀಯ ಮಟ್ಟದ ಕಾರ್ಯಕ್ರಮ. ನೀವು ಚರ್ಚೆಯ ಹಾದಿ ತಪ್ಪಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು 45 ನಿಮಿಷಗಳ ಕಾಲ ಆಕ್ರೋಶಭರಿತ ಚರ್ಚೆ ನಡೆಯಿತು. ಕೊನೆಗೆ ಆಡಳಿತ ಪಕ್ಷದ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಅವರು ಇನ್ನೊಂದು ಕೆಎಸ್ಸಾರ್ಟಿಸಿ ಆಧಿಕಾರಿಗಳ ಇನ್ನೊಂದು ಸಭೆ ನಡೆಸಿ ಎಲ್ಲಾ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲಹೆ ನೀಡುವುದರೊಂದಿಗೆ ಚರ್ಚೆಗೆ ತೆರೆ ಎಳೆಯಲಾಯಿತು. 

ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಸಿಮೊಟ್ಟೆ ನೀಡಿದ ಪ್ರಕರಣ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಮತ್ತೊಮ್ಮೆ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಸದಸ್ಯೆ ಉಷಾ ಅಂಚನ್ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಆಸ್ಪತ್ರೆಯಲ್ಲಿ ಈ ರೀತಿಯ ಬೇಜವಾಬ್ದಾರಿ ವರ್ತನೆ ನಡೆದಿದೆ. ಹೆರಿಗೆ ವಾರ್ಡಿನಲ್ಲಿ ಸ್ವಚ್ಛತೆಯ ಕೊರತೆ ಕಂಡು ಬರುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಆಡಳಿತ ವೈದ್ಯಾಧಿಕಾರಿ ಡಾ.ವೀಣಾ ಅಡುಗೆ ಸಿಬ್ಬಂದಿಗಳಿಂದ ನಡೆದ ಬೇಜವಾಬ್ದಾರಿ ನಿಜ. ಈ ಬಗ್ಗೆ ಈಗಾಗಲೇ ಅವರಿಗೆ 'ಮೆಮೊ' ನೀಡಲಾಗಿದೆ. ಆಸ್ಪತ್ರೆ ಸ್ವಚ್ಛತೆ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.

ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡುವವರಿಗೆ ಸಮಸ್ಯೆಯಾಗುತ್ತಿರುವ ಕುರಿತು ಸದಸ್ಯ ಮುಕುಂದ ಗೌಡ ಬಜತ್ತೂರು ವಿಷಯ ಪ್ರಸ್ತಾಪ ಮಾಡಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಡಾ.ವೀಣಾ ಆಸ್ಪತ್ರೆಯಲ್ಲಿ ಕೇವಲ ಮೂರು ಡಯಾಲಿಸಿಸ್ ಯಂತ್ರಗಳಿವೆ. ದಿನಕ್ಕೆ 9 ಮಂದಿಗೆ ಮಾತ್ರ ಡಯಾಲಿಸಿಸ್ ಮಾಡಲು ಸಾಧ್ಯವಾಗುತ್ತದೆ. ಈಗಾಗಲೇ 40 ಮಂದಿ ನೋಂದಾವಣೆ ಮಾಡಿಕೊಂಡಿದ್ದಾರೆ. ಬಂದ ರೋಗಿಗಳನ್ನು ಕಾಯುವವರ ಪಟ್ಟಿಗೆ ಸೇರಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಜಾಗ ಇದೆ. ಆದರೆ ಯಂತ್ರಗಳ ಹಾಗೂ ಸಿಬ್ಬಂದಿಗಳ ಕೊರತೆ ಇದೆ ಎಂದು ಮಾಹಿತಿ ನೀಡಿದರು. ರೋಗಿಗಳಿಗೆ ಅನುಕೂಲವಾಗುವಂತೆ  ಸರಕಾರದಿಂದ ಡಯಾಲಿಸಿಸ್ ಯಂತ್ರ ಹಾಗೂ ಸಿಬ್ಬಂದಿ ನೀಡುವಂತೆ ಆಗ್ರಹಿಸುವ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷೆ ರಾಜೇಶ್ವರಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಸ್ಥಾಯಿಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಪುತ್ತೂರು ತಹಶೀಲ್ದಾರ್ ಅನಂತಶಂಕರ್, ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News