ತನ್ನದು ವಿದ್ಯಾಕ್ಷೇತ್ರಕ್ಕೆ ಮೊದಲ ಆದ್ಯತೆ : ಶಾಸಕ ಲಾಲಾಜಿ

Update: 2018-09-11 16:28 GMT

ಪಡುಬಿದ್ರೆ, ಸೆ. 11: ಕಾಪು ಕ್ಷೇತ್ರದಲ್ಲಿ ಉದ್ಯೋಗಕ್ಕೆ ಬಹಳಷ್ಟು ಅವಕಾಶಗಳಿದ್ದರೂ ಇನ್ನೂ ಉದ್ಯೋಗ ಸೃಷ್ಟಿಯಾಗುತಿಲ್ಲ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಅಸಮಾಧಾನ ವ್ಯಕ್ತಪಡಿಸಿದರು.

ಅವರು ರವಿವಾರ ಬೇಂಗ್ರೆ ಮಧ್ವನಗರದ ತರಂಗಿಣಿ ಮಿತ್ರ ಮಂಡಳಿ ಸಂಸ್ಥೆಯು ಪ್ರತೀ ವರ್ಷವೂ ವಿತರಿಸುವಂತಹಾ ವಿದ್ಯಾರ್ಥಿ ಪ್ರೋತ್ಸಾಹಧನ ಮತ್ತು ಆರೋಗ್ಯ ನಿಧಿ ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾಕ್ಷೇತ್ರಕ್ಕೆ ಕಾಪು ಕ್ಷೇತ್ರದಲ್ಲಿ ತನ್ನದು ಮೊದಲ ಆದ್ಯತೆಯಾಗಿರುತ್ತದೆ. ಅವಕಾಶಗಳು ಈಗ ವಿದ್ಯಾಭ್ಯಾಸ ಮಾಡಿ ಹೊರಬರುವ ವಿದ್ಯಾರ್ಥಿಗಳಿಗೆ ಬಹಳಷ್ಟಿದ್ದರೂ ಎಲ್ಲರಿಗೂ ಕಾಪು ಕ್ಷೇತ್ರದಲ್ಲೇ ಉದ್ಯೋಗಗಳನ್ನು ಸೃಷ್ಟಿಸಲಾಗಿಲ್ಲ. ಸುಜ್ಲಾನ್‍ನಂತಹಾ ಯೋಜನೆಗಳು 3000 - 4000ದಷ್ಟು ಉದ್ಯೋಗ ಸೃಷ್ಟಿಸುತ್ತೇವೆ ಎಂದವರು ಈಗ ಭೂಮಿ ಮಾರಾಟ ಮಾಡುತ್ತಿದ್ದಾರೆ. ಹೋರಾಟದ ಮೂಲಕವೇ ಬದುಕನ್ನು ಕಟ್ಟಿಕೊಂಡಿರುವ ತಾನು ಈಗಲೂ ತನ್ನ ಕ್ಷೇತ್ರದ ಜನತೆಯ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ಸಿದ್ಧನಿದ್ದೇನೆ ಎಂದರು. 

ಮಣಿಪಾಲ್ ಎಂಐಟಿ ಎಂಜೀನಿಯರಿಂಗ್ ವಿದ್ಯಾರ್ಥಿ ಶ್ರೀಶ ಆಚಾರ್ಯ, ದೇಶದಲ್ಲಿ ಈಗ ಯುವ ಎಂಜೀನಿಯರ್‍ಗಳ ಸಂಖ್ಯೆಯೇ ಅಧಿಕವಿದ್ದರೂ ದೇಶದಲ್ಲಿ ಶೇಕಡಾ 40ಕ್ಕೂ ಅಧಿಕ ನಿರುದ್ಯೋಗವಿದೆ. ಬ್ರಿಟಿಷರ ಕಾಲದ ಶಿಕ್ಷಣ ಪದ್ಧತಿಯನ್ನೇ ನಾವು ಈಗಲೂ ಮುಂದುವರಿಸಿದ್ದೇವೆ. ಭಾರತೀಯತೆ ಮತ್ತು ನಮ್ಮತನವನ್ನು ನಾವು ಕಳೆದುಕೊಳ್ಳದಿರೋಣ ಎಂದರು. 

ಸಮಾರಂಭದಲ್ಲಿ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸುಮಾರು 35000ರೂ. ಗಳ ವಿದ್ಯಾರ್ಥಿವೇತನ ಹಾಗೂ ಮೂವರು ಹಿರಿಯರಿಗೆ ತಲಾ 10000ರೂ. ಗಳ ಆರೋಗ್ಯ ನಿಧಿಯನ್ನು ವಿತರಿಸಲಾಯಿತು. 

ಸಂಸ್ಥೆಯ ಅಧ್ಯಕ್ಷ ರಮಾಕಾಂತ ರಾವ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ವೆಂಕಟಗಿರಿ ರಾವ್, ತರಂಗಿಣಿ ಮಿತ್ರ ಮಂಡಳಿಯ ಕೋಶಾಧಿಕಾರಿ ರಘುಪತಿ ರಾವ್, ಗೌರವಾಧ್ಯಕ್ಷ ಸುರೇಶ್ ರಾವ್, ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಸಂಜಯ ಕುಮಾರ್  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News