ಮೀಸಲಾಯಿತಿ ಬದಲಾಯಿಸಿ ಅಧಿಕಾರ ದುರುಪಯೋಗ: ಮಟ್ಟಾರು ರತ್ನಾಕರ ಹೆಗ್ಡೆ

Update: 2018-09-11 16:33 GMT

ಕಾಪು, ಸೆ. 11: ನಗರಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಉಡುಪಿ ಜಿಲ್ಲೆಯಲ್ಲಿ ಸಾಧಿಸಿರುವ ಜಯದಿಂದ ಭೀತಿಗೊಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೀಸಲಾತಿಯನ್ನು ಮರು ಬದಲಾಯಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದರು.

ಮಂಗಳವಾರ ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ಜರಗಿದ ಕಾಪು ಕ್ಷೇತ್ರ ಬಿಜೆಪಿ ಕಾರ್ಯಕಾರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಈ ಮೂಲಕ ಅಡ್ಡ ದಾರಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನಕ್ಕೆ ಕೈ ಹಾಕಿದೆ. ಇಂತಹ ಸಂದರ್ಭದಲ್ಲಿ ನಾವೂ ಕೂಡಾ ಜಾಗೃತರಾಗಬೇಕಿದೆ. ಮುಂದಿನ ದಿನಗಳಲ್ಲಿ ಕಾಪು ಪುರಸಭೆಯ ಅಧಿಕಾರದ ಗದ್ದುಗೆಯನ್ನು ಹಿಡಿಯುವ ನಿಟ್ಟಿನಲ್ಲಿ ಯೋಜನೆ - ಯೋಚನೆಗಳನ್ನು ರೂಪಿಸಬೇಕಿದೆ ಎಂದು ಅವರು ಹೇಳಿದರು.

ಚಿಕ್ಕಾಸು ಬಿಡುಗಡೆಯಾಗಿಲ್ಲ: ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ರಾಜ್ಯದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದು ಮೂರು ತಿಂಗಳು ಕಳೆದರೂ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ವೇಗ ದೊರಕಿಲ್ಲ. ಶಾಸಕರ ನಿಧಿಯ ಕನಿಷ್ಟ ಒಂದು ರೂಪಾಯಿ ಅನುದಾನವೂ ಬಿಡುಗಡೆಯಾಗಿಲ್ಲ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯ ಅನುದಾನ ಬಿಡುಗಡೆಗೂ ಮೀನಾ ಮೇಷ ಎಣಿಸುತ್ತಿದೆ. ಒಟ್ಟಾರೆಯಾಗಿ ಸರ್ಕಾರದ ಸ್ಥಿತಿಗತಿಯೇ ಸರಿಯಿಲ್ಲದಂತಾಗಿದೆ. ಯಾವುದೇ ಸಂದರ್ಭದಲ್ಲೂ ಸರ್ಕಾರ ಬೀಳುವ ಸಾಧ್ಯತೆಗಳೇ ಹೆಚ್ಚಾಗಿದೆ ಎಂದರು. 

ಕ್ಷೇತ್ರ ಪ್ರಭಾರಿ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಿಜೆಪಿ ಜಯ ಸಾಧಿಸಿದ ಬಳಿಕದ ಪ್ರಥಮ ಕಾರ್ಯಕಾರಿಣಿ ಸಭೆ ಇದಾಗಿದ್ದು, ಈ ಜಯದ ಹಿಂದೆ ದುಡಿದಿರುವ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಇದೇ ಜಯವನ್ನು ಮುಂದುವರಿಸಿ, ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಗುರಿಯೊಂದಿಗೆ ನಾವು ಮುನ್ನಡೆಯೋಣ. ಈ ಬಗ್ಗೆ ಈಗಿಂದಲೇ ಚರ್ಚೆ, ವಿಚಾರ ವಿನಿಮಯ ಮತ್ತು ಸಂಘಟನಾ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕಿದೆ ಎಂದರು. 

ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಶ್ಯಾಮಲಾ ಕುಂದರ್, ಜಿಲ್ಲಾ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು. 

ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮುರಳೀಧರ ಪೈ ವಂದಿಸಿದರು. ನವೀನ್ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

ಸಂಘಟನಾ ಕೌಶಲ್ಯದಿಂದ ಜಯ:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಂಘಟನಾ ಕೌಶಲ್ಯ, ಸಂಘಟನಾ ಶಕ್ತಿ ಮತ್ತು ಕಾರ್ಯಕರ್ತರ ಶ್ರಮದಿಂದಾಗಿ ಬಿಜೆಪಿಗೆ ಗೆಲುವಾಗಿದೆ. ಬಿಜೆಪಿಯ ಗೆಲುವಿನ ಓಟವನ್ನು ಮುಂದಿನ ಲೋಕಸಭಾ ಚುನಾವಣೆಯವರೆಗೂ ಮುಂದುವರಿಸಿಕೊಂಡು ಹೋಗುವುದು ಮತ್ತು ಅಲ್ಲೂ ನಮ್ಮ ವಿಜಯದ ಪತಾಕೆಯನ್ನು ಹಾರಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News