ವಾಮದಪದವು ಸ.ಪ್ರ.ದ.ಕಾಲೇಜು: ನ್ಯಾಕ್‍ನಿಂದ ಬಿ-ಗ್ರೇಡ್ ಮಾನ್ಯತೆ

Update: 2018-09-11 17:00 GMT

ಬಂಟ್ವಾಳ, ಸೆ. 11: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಸಮಿತಿಯಿಂದ ಬಿ-ಗ್ರೇಡ್ ಮಾನ್ಯತೆಯನ್ನು  ಪಡೆದಿದೆ ಎಂದು ಕಾಲೇಜಿನ ಪ್ರಾಂಶುಪಾಲ  ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ಅವರು ತಿಳಿಸಿದ್ದಾರೆ.

ಮೂರನೆ ಆವೃತ್ತಿಯ ನ್ಯಾಕ್ ಮಾನ್ಯತೆಗಾಗಿ ಹೊಸ ವಿಧಾನದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಸುಧಾಲೈ ಮುತ್ತುರವರ ಅಧ್ಯಕ್ಷತೆಯಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನ ಕೇಂದ್ರಿಯ ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಪ್ರೊ. ಕುಂಕುಂ ಭಟ್ಟಾಚಾರ್ಯ ತಂಡದ ಸದಸ್ಯ ಸಂಯೋಜಕರಾಗಿದ್ದು, ಮಧ್ಯ ಪ್ರದೇಶದ ಇಂದೋರ್‍ನ ಎಂ.ಬಿ. ಕಾಲ್ಸ ಕಾಲೇಜಿನ  ಪ್ರಾಂಶುಪಾಲ ಡಾ. ತರಂಜಿತ್ ಸೂದ್  ಸದಸ್ಯರಾಗಿದ್ದ ನ್ಯಾಕ್ ಪೀರ್ ತಂಡವು ಕಾಲೇಜಿಗೆ ಭೇಟಿ ನೀಡಿ, ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ಬೋಧನೆ  ಮತ್ತು ಕಲಿಕೆ, ಮೂಲ ಸೌಕರ್ಯ, ಸಂಶೋಧನೆ, ನಾಯಕತ್ವ, ವಿಸ್ತರಣಾ  ಚಟುವಟಿಕೆಗಳು ಇವುಗಳನ್ನು ವಿಶ್ಲೇಷಿಸಿ ಅಂಕಗಳನ್ನು ನೀಡಿತ್ತು.  2018ರಲ್ಲಿ ಮೂರನೆ ಆವೃತ್ತಿಯ  ಹೊಸ ವಿಧಾನದಲ್ಲಿ 2.28 ಸಿಜಿಪಿಎ ಅಂಕಗಳೊಂದಿಗೆ ಕಾಲೇಜು ಗ್ರೇಡ್ ಬಿ-ಮಾನ್ಯತೆ ಪಡೆದಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ 2011 ರಲ್ಲಿ ಎರಡನೆ ಆವೃತ್ತಿಯಲ್ಲಿ  2.16 ಸಿಜಿಪಿಎ ಅಂಕಗಳೊಂದಿಗೆ  ಗ್ರೇಡ್ ಬಿ ಮಾನ್ಯತೆ ಪಡೆಯಲಾಗಿತ್ತು. ನ್ಯಾಕ್ ಮೌಲ್ಯಾಂಕ  ಪ್ರಕ್ರಿಯೆಯಲ್ಲಿ ಸಹಕರಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ, ಶಿಕ್ಷಕ - ರಕ್ಷಕ ಸಂಘಕ್ಕೆ, ಹಳೆ ವಿದ್ಯಾರ್ಥಿಗಳಿಗೆ, ಬೋಧಕ -ಬೋಧಕೇತರ ವೃಂದಕ್ಕೆ ಕಾಲೇಜಿನ ಪ್ರಾಂಶುಪಾಲ  ಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ  ಮತ್ತು ಕಾಲೇಜಿನ  ನ್ಯಾಕ್ ಸಂಯೋಜಕ ಡಾ. ರವಿ ಎಂ. ಎನ್. ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News