ಸಿಂಧು, ಶ್ರೀಕಾಂತ್, ಪ್ರಣಯ್ ಶುಭಾರಂಭ

Update: 2018-09-11 18:26 GMT

ಟೋಕಿಯೊ, ಸೆ.11: ಭಾರತದ ಶಟ್ಲರ್‌ಗಳಾದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್ ಹಾಗೂ ಎಚ್‌ಎಸ್ ಪ್ರಣಯ್ ಜಪಾನ್ ಓಪನ್‌ನ ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿ ಶುಭಾರಂಭ ಮಾಡಿದ್ದಾರೆ.

  ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಸಿಂಧು 53 ನಿಮಿಷಗಳ ಹೋರಾಟದಲ್ಲಿ ಜಪಾನ್‌ನ ಸಯಾಕಾ ಟಕಹಶಿ ಅವರನ್ನು 21-17, 7-21, 21-13 ಗೇಮ್‌ಗಳಿಂದ ಮಣಿಸಿದರು.

ಸಿಂಧು ಮುಂದಿನ ಸುತ್ತಿನಲ್ಲಿ ಚೀನಾದ ಫಾಂಗ್‌ಜೀ ಗಾಯೊರನ್ನು ಎದುರಿಸಲಿದ್ದಾರೆ. ಗಾಯೊ ಮೊದಲ ಸುತ್ತಿನಲ್ಲಿ ಭಾರತದ ವೈಷ್ಣವಿ ರೆಡ್ಡಿ ಅವರನ್ನು 21-10, 21-8 ಅಂತರದಿಂದ ಸೋಲಿಸಿದ್ದರು.

ಸಿಂಧು ಏಶ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಜಯಿಸಿದ್ದರು. ಇದೀಗ ಜಪಾನ್ ಓಪನ್‌ನಲ್ಲಿ ಫೈನಲ್‌ನಲ್ಲಿ ಸೋಲುವ ಚಾಳಿಯಿಂದ ಹೊರಬರುವ ವಿಶ್ವಾಸದಲ್ಲಿದ್ದಾರೆ. ಸಿಂಧು ಈ ವರ್ಷ ಆಡಿರುವ ಪ್ರಮುಖ ಟೂರ್ನಿಗಳಾದ ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಹಾಗೂ ಏಶ್ಯನ್ ಗೇಮ್ಸ್ ನಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಜಯಿಸಲು ವಿಫಲರಾಗಿದ್ದರು.

ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಪ್ರಣಯ್ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಇಂಡೋನೇಶ್ಯಾದ ಜೋನಾಥನ್ ಕ್ರಿಸ್ಟಿ ಅವರನ್ನು 21-18, 21-17 ಮಣಿಸಿದರು.

ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಚೀನಾದ ಯುಕ್ಸಿಯಾಂಗ್ ಹ್ಯೂಯಾಂಗ್ ವಿರುದ್ಧ 21-13, 21-15 ಅಂತರದಿಂದ ಜಯ ಸಾಧಿಸಿದ್ದಾರೆ.

ಪ್ರಣಯ್ ಮುಂದಿನ ಸುತ್ತಿನಲ್ಲಿ ಇಂಡೋನೇಶ್ಯಾದ ಇನ್ನೋರ್ವ ಆಟಗಾರ ಅಂಥೋನಿ ಸಿನಿಸುಕರನ್ನು ಎದುರಿಸಲಿದ್ದಾರೆ. ಹಾಂಕಾಂಗ್‌ನ ವಿನ್ಸೆಂಟ್ ವಾಂಗ್ ವಿಂಗ್ ಕಿ ಶ್ರೀಕಾಂತ್ ಸವಾಲು ಎದುರಿಸಲಿದ್ದಾರೆ.

ಶ್ರೀಕಾಂತ್ ಹಾಗೂ ಪ್ರಣಯ್ ಇತ್ತೀಚೆಗೆ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತು ಆಘಾತ ಅನುಭವಿಸಿದ್ದರು.

ಸ್ಪರ್ಧೆಯಲ್ಲಿದ್ದ ಇನ್ನೋರ್ವ ಆಟಗಾರ ಸಮೀರ್ ವರ್ಮಾ ಮತ್ತೊಂದು ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋತಿದ್ದಾರೆ.

 ಇದೇ ವೇಳೆ ಭಾರತದ ಮಿಶ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿ ರಾಂಕಿರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. ಪುರುಷರ ಡಬಲ್ಸ್ ಜೋಡಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ 2ನೇ ಸುತ್ತಿಗೆ ತಲುಪಿದ್ದಾರೆ.

ರಾಂಕಿರೆಡ್ಡಿ-ಪೊನ್ನಪ್ಪ ಅವರು ಎರಡನೇ ಶ್ರೇಯಾಂಕದ ಯಿಲು ವಾಂಗ್ ಹಾಗೂ ಡಾಂಗ್‌ಪಿಂಗ್ ಹ್ವಾಂಗ್ ವಿರುದ್ಧ 13-21, 17-21 ಅಂತರದಿಂದ ಸೋತಿದ್ದಾರೆ. ಚೋಪ್ರಾ ಹಾಗೂ ರೆಡ್ಡಿ ಮಲೇಶ್ಯಾದ ಮ್ಯಾಥ್ಯೂ ಫೊಗರ್ಟಿ ಹಾಗೂ ಇಸಬೆಲ್ ಝಾಂಗ್ ವಿರುದ್ಧ 21-9, 21-6 ಗೇಮ್‌ಗಳಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News