ಲೋಕಸಭಾ ಚುನಾವಣೆ: ಐಪಿಎಲ್ ದಕ್ಷಿಣ ಆಫ್ರಿಕಕ್ಕೆ ಸ್ಥಳಾಂತರ ಸಂಭವ

Update: 2018-09-11 18:27 GMT

  ಮುಂಬೈ, ಸೆ.11:ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕದ ಪ್ರಕಟನೆೆಯನ್ನು ವಿವಿಧ ರಾಜಕೀಯ ಪಕ್ಷಗಳು ಕಾಯುತ್ತಿವೆ. ರಾಜಕೀಯ ಪಕ್ಷಗಳ ಜೊತೆಗೆ ಇದೀಗ ಬಿಸಿಸಿಐ ಕೂಡಾ ಚುನಾವಣಾ ಆಯೋಗದ ಪ್ರಕಟಣೆಯನ್ನು ಕಾಯುತ್ತಿದೆ.

 ಹನ್ನೆರಡನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯಗಳನ್ನು ದಕ್ಷಿಣ ಆಫ್ರಿಕಕ್ಕೆ ಸ್ಥಳಾಂತರಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಹಿಂದೆ ಎರಡು ಆವೃತ್ತಿಗಳ ಪಂದ್ಯಗಳನ್ನು ಬೇರೆ ದೇಶಗಳಿಗೆ ಸ್ಥಳಾಂತರಿಸಲಾಗಿತ್ತು.

  ಸಾರ್ವತ್ರಿಕ ಚುನಾವಣಾ ಕಾರಣಕ್ಕಾಗಿ 2009ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. 2014ರಲ್ಲಿ ಯುಎಇಯಲ್ಲಿ ಐಪಿಎಲ್ ಟೂರ್ನಿಯ ಆರಂಭಿಕ ಹಂತದ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಯುಎಇಯಲ್ಲಿ ಟೂರ್ನಿಯ ಎಲ್ಲ ಪಂದ್ಯಗಳನ್ನು ಆಯೋಜಿಸಲು ಕ್ರೀಡಾಂಗಣದ ಕೊರತೆ ಇದೆ. ಯುಎಇನಲ್ಲಿರುವ ದುಬೈ, ಶಾರ್ಜಾ ಮತ್ತು ಅಬುಧಾಬಿಯ ಕ್ರೀಡಾಂಗಣಗಳಲ್ಲಿ ಐಪಿಎಲ್ ಟ್ವೆಂಟಿ-20 ಟೂರ್ನಿಯ ಎಲ್ಲ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಿಲ್ಲ. ಆದರೆ ದಕ್ಷಿಣ ಆಫ್ರಿಕದಲ್ಲಿ ಟೂರ್ನಿಯ ಎಲ್ಲ 60 ಪಂದ್ಯಗಳನ್ನು ಆಯೋಜಿಸಲು ಸಾಧ್ಯವಿದೆ. ಈ ಕಾರಣದಿಂದಾಗಿ ಬಿಸಿಸಿಐ ಆಫ್ರಿಕದಲ್ಲಿ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಆಸಕ್ತಿ ವಹಿಸಿದೆ ಎಂದು ತಿಳಿದು ಬಂದಿದೆ.

<ಏಶ್ಯಾಕಪ್‌ಗೆ ಎರಡು ಬ್ಯಾಚ್‌ಗಳಲ್ಲಿ ತೆರಳಲಿರುವ ಆಟಗಾರರು: ಯುಎಇನಲ್ಲಿ ನಡೆಯಲಿರುವ ಏಶ್ಯಾಕಪ್‌ಗೆ ಟೀಮ್ ಇಂಡಿಯಾದ ಆಟಗಾರರು ಎರಡು ಬ್ಯಾಚ್‌ಗಳಲ್ಲಿ ತೆರಳಲಿದ್ದಾರೆ.

ಮೊದಲ ಬ್ಯಾಚ್ ಸೆ.13ರಂದು ಮತ್ತು ಎರಡನೇ ಬ್ಯಾಚ್ ಸೆ.16ರಂದು ದುಬೈಗೆ ತೆರಳಲಿದೆ.

 ಮೊದಲ ಬ್ಯಾಚ್‌ನಲ್ಲಿ ಈಗಾಗಲೇ ಭಾರತದಲ್ಲಿರುವ ನಾಯಕ ರೋಹಿತ್ ಶರ್ಮಾ, ಎಂಎಸ್ ಧೋನಿ, ಅಂಬಟಿ ರಾಯುಡು, ಮನೀಷ್ ಪಾಂಡೆ, ಕೇದಾರ್ ಜಾಧವ್, ಕುಲ್‌ದೀಪ್ ಯಾದವ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್ ಮತ್ತು ಖಲೀಲ್ ಅಹ್ಮದ್ ಗುರುವಾರ ದುಬೈಗೆ ತೆರಳಲಿದ್ದಾರೆ. ಉಳಿದ 6 ಮಂದಿ ಆಟಗಾರರಾದ ಶಿಖರ್ ಧವನ್, ಲೋಕೇಶ್ ರಾಹುಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಜಸ್‌ಪ್ರೀತ್ ಬುಮ್ರಾ ಮತ್ತು ಶಾರ್ದೂಲ್ ಠಾಕೂರ್ ಸೆ. 16ರಂದು ತೆರಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News