ಬೆಳಪು: ಸೆ.16ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ

Update: 2018-09-12 06:07 GMT

ಪಡುಬಿದ್ರೆ, ಸೆ. 12: ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಸೆ. 16 ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ.

ಮಂಗಳವಾರ ಪಂ. ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಪು ಗ್ರಾಮ ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ 2017-18ರ ಬಜೆಟ್‍ನಲ್ಲಿ ಮಂಜೂರಾತಿಗೊಂಡ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಬೆಳಪುವಿನಲ್ಲಿ ಭೂಮಿ ಪೂಜೆ ನೆರವೇರಿಸುವರು ಎಂದು ತಿಳಿಸಿದರು.

ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಬೆಳಪು ಗ್ರಾಮದಲ್ಲಿ 5.35 ಎಕರೆ ಜಮೀನಿನಲ್ಲಿ ಕಾಲೇಜು ನಿರ್ಮಾಣಗೊಳ್ಳಲಿದೆ. ಹಿಂದಿನ ಶಾಸಕ ವಿನಯಕುಮಾರ್ ಸೊರಕೆಯವರ ವಿಶೇಷ ಸಹಕಾರದಿಂದ ಕಾಲೇಜು ಮಂಜೂರುಗೊಂಡಿದ್ದು, ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.

ಉದ್ಘಾಟನೆ, ಸನ್ಮಾನ: 35 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಮೃದ್ಧಿ-ಸಡಗರ-ಚೈತನ್ಯ ವಾಣಿಜ್ಯ ಸಂಕೀರ್ಣಗಳ ಉದ್ಘಾಟನೆ, ಬಸ್ ತಂಗುದಾಣ, ಬೆಳಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹೆಚ್ಚುವರಿ ಕೊಠಡಿ, ಚಿಣ್ಣರ ಅಂಗಳ ಅಂಗನವಾಡಿ ಉದ್ಘಾಟನೆ ನಡೆಯಲಿದೆ. ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಚೈತನ್ಯ ವಿಮಾ ಕಾರ್ಡ್, ವಿಮಾ ಚೆಕ್ ಮತ್ತು ಸಮವಸ್ತ್ರ ವಿತರಣೆ, ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದರು.

ಬೆಳಪುವಿನಲ್ಲಿ ಈಗಾಗಲೇ 400 ಕೋಟಿ ರೂಪಾಯಿ ವೆಚ್ಚದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಮಂಜೂರುಗೊಂಡಿದ್ದು, 146 ಕೋಟಿ ಅನುದಾನ ಪ್ರಥಮ ಹಂತದ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ 50 ಕೋಟಿ ಹಣ ಮಂಜೂರುಗೊಳಿಸಿದೆ.  ಸುಮಾರು 30 ಎಕರೆ ಪ್ರದೇಶದಲ್ಲಿ ಅನುಷ್ಟಾನಗೊಳ್ಳಲಿರುವ ಯೋಜನೆ ಗೃಹಮಂಡಳಿ ಸಂಸ್ಥೆಯ ಮೂಲಕ ಕಾರ್ಯಗತಗೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ. ರಾಜ್ಯದಲ್ಲಿಯೇ ವಿಶ್ವದರ್ಜೆಯ ವಿಜ್ಞಾನ ಸಂಶೋಧನಾ ಕೇಂದ್ರ ಇದಾಗಲಿದ್ದು, ಯೋಜನೆ ಸಂಪೂರ್ಣವಾಗಿ ಕಾರ್ಯಗತವಾದಲ್ಲಿ ಬೆಳಪು ಕಾಡು ಎಂದೇ ಖ್ಯಾತಿ ಪಡೆದಿದ್ದ ಬೆಳಪು ಗ್ರಾಮ ಶೈಕ್ಷಣಿಕ ಗ್ರಾಮವಾಗಿ ರೂಪುಗೊಳ್ಳಲಿದೆ ಎಂದು ಅವರು ತಿಳಿಸಿದರು.

ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಂಸದರಾದ ಶೋಭಾ ಕರಂದ್ಲಾಜೆ, ಆಸ್ಕರ್ ಫರ್ನಾಂಡಿಸ್, ಕರ್ನಾಟಕ ಸಹಕಾರಿ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಸದಸ್ಯರಾದ ಎಸ್. ಎಲ್. ಭೋಜೇಗೌಡ, ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಗ್ರಾಪಂ ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ನೂರ್ ಜಹಾನ್, ವಿಮಲಾ ದೇವಾಡಿಗ, ಪಿಡಿಒ ಹೆಚ್. ಆರ್. ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News