ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಒತ್ತಾಯ: ಮನವಿ

Update: 2018-09-12 11:02 GMT

ಕಾಪು, ಸೆ. 12: ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿ ಇತರ ಭಾಷೆಗಳ ನಾಮಫಲಕಗಳು ಕಂಡುಬರುತಿದ್ದು, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಈ ಬಗ್ಗೆ ಕಾಪು ತಹಸೀಲ್ದಾರ್‍ಗೆ ಬುಧವಾರ ಮನವಿ ಸಲ್ಲಿಸಿದ ಕರವೇ (ಪ್ರವೀಣ್ ಶೆಟ್ಟಿ ಬಣ), 15ದಿನಗಳೊಳಗಾಗಿ ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಇತರ ಭಾಷೆಯ ನಾಮಫಲಕ, ಫ್ಲೆಕ್ಸ್, ಬಂಟಿಂಗ್ಸ್‍ಗಳನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು. ತಪ್ಪಿದಲ್ಲಿ ಸಂಘಟನೆಯು ಅವುಗಳನ್ನು ತೆರವುಗೊಳಿಸಲು ಕಾರ್ಯಪ್ರವೃತ್ತವಾಗಲಿದೆ. ಈ ಸಮಯದಲ್ಲಿ ಉಂಟಾಗುವ ಯಾವುದೇ ಅಹಿತಕರ ಘಟನೆಗಳು ಸಂಬಂಧಿಸಿದಲ್ಲಿ ಅದಕ್ಕೆ ಸ್ಥಳೀಯಾಡಳಿತ ಹಾಗೂ ಇಲಾಖಾ ಅಧಿಕಾರಿಗಳೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.

ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಮಾತನಾಡಿ, ರಾಜ್ಯದಲ್ಲಿ ಶೇ. 75ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯಗೊಳಿಸಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶ ಕೇವಲ ಕಡತಗಳಿಗೆ ಸೀಮಿತವಾಗಿದೆ. ತಾವು ತಮ್ಮ ವ್ಯಾಪ್ತಿ ಪ್ರದೇಶಗಳಲ್ಲಿ ಕಡ್ಡಾಯ ಕನ್ನಡಕ್ಕಾಗಿ ಸೂಕ್ತ ಆದೇಶವನ್ನು ಸುತ್ತೋಲೆಗಳನ್ನು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಕಳುಹಿಸಬೇಕು ಹಾಗು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. 

ಪತ್ರಕರ್ತರೊಂದಿಗೆ ಮಾತನಾಡಿದ ತಹಶೀಲ್ದಾರ್ ಗುರುಸಿದ್ಧಯ್ಯ ಹಿರೇಮಠ್ ಮಾತನಾಡಿ, ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಜಾರಿಗೊಳಿಸಲಾಗಿದೆ. ಈ ಬಗ್ಗೆ ಕಾಪು ತಾಲ್ಲೂಕಿನ ಎಲ್ಲಾ ಪಿಡಿಓ ಹಾಗೂ ಮುಖ್ಯಾಧಿಕಾರಿಗಳಿಗೆ ನೋಟೀಸು ನೀಡಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.

ಜಿಲ್ಲಾ ಉಪಾಧ್ಯಕ್ಷ ಸಿ.ಪಿ. ಅಬ್ದುಲ್ ರಹ್ಮಾನ್, ಪಡುಬಿದ್ರಿ ಘಟಕದ ಅಧ್ಯಕ್ಷ ಮನ್ಸೂರ್ ಎಂ.ಎಸ್, ಕಾರ್ಯದರ್ಶಿ ಸುಜಿತ್ ಪಡುಬಿದ್ರಿ, ಜೈಕರ್ನಾಟಕ ಉಪಾಧ್ಯಕ್ಷ ಜಮಾಲ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News