ಸೆ.14ರಿಂದ ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ‘ಗ್ರಾಮೀಣ ಸಂತೆ’

Update: 2018-09-12 12:47 GMT

ಉಡುಪಿ, ಸೆ.12: ಮಂಗಳೂರಿನ ಗ್ರಾಮೀಣ ಸಂತೆ ಒಕ್ಕೂಟ ದ.ಕ.ಜಿಲ್ಲೆಯ ಮಂಗಳೂರು ಹಾಗೂ ಸುರತ್ಕಲ್‌ಗಳಲ್ಲಿ ಯಶಸ್ವಿಯಾಗಿ ನಡೆಸಿದ ಗ್ರಾಮೀಣ ಸಂತೆಯನ್ನು ಇದೀಗ ಉಡುಪಿ ಜಿಲ್ಲೆಗೂ ವಿಸ್ತರಿಸಲು ಬಯಸಿದ್ದು, ಮೂರನೇ ಗ್ರಾಮೀಣ ಸಂತೆ ಇದೇ ಸೆ.14ರಿಂದ 16ರವರೆಗೆ ನಗರದ ಬನ್ನಂಜೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಒಕ್ಕೂಟದ ಗೌರವ ನಿರ್ದೇಶಕ ಲೈನ್ಕಜೆ ರಾಮಚಂದ್ರ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮಚಂದ್ರ ಅವರು ಮಂಗಳೂರಿನಲ್ಲಿ ಒಕ್ಕೂಟ ಆಯೋಜಿಸಿದ ಎರಡೂ ಗ್ರಾಮೀಣ ಸಂತೆಗಳು ನಗರವಾಸಿಗಳಿಗೆ ಭಾರೀ ಸಂತಸವನ್ನು ತಂದಿದೆ. ಇದರಿಂದ ಈ ವಾರ ಉಡುಪಿಯಲ್ಲಿ ಹಾಗೂ ಮುಂದಿನ ವಾರ ಕುಂದಾಪುರದಲ್ಲಿ ಈ ಗ್ರಾಮೀಣ ಸಂತೆಯನ್ನು ಆಯೋಜಿಸಲಾಗುತ್ತಿದೆ ಎಂದರು.

ಉಡುಪಿಯ ಸಂತೆಯನ್ನು ಸೆ.14ರ ಶುಕ್ರವಾರ ಬೆಳಗ್ಗೆ 11ಗಂಟೆಗೆ ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ಬಿಲ್ಲವ ಸಂಘದ ಅಧ್ಯಕ್ಷ ಬಿ.ಬಿ.ಪೂಜಾರಿ, ಉದ್ಯಮಿ ಮನೋಹರ ಶೆಟ್ಟಿ ಇವರು ಉಪಸ್ಥಿತರಿರುವರು ಎಂದರು.

ಗ್ರಾಮೀಣ ಸಂತೆಯಲ್ಲಿ ಖಾದಿ ಉತ್ಸವ ಹಾಗೂ ಸಿರಿಧಾನ್ಯ ಆಹಾರ ಮೇಳದೊಂದಿಗೆ ಸಿರಿಧಾನ್ಯ ಆಹಾರೋತ್ಸವೂ ಇರಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಯವ ಉತ್ಪನ್ನಗಳ ಮಳಿಗೆಗಳನ್ನು ತೆರೆಯಲಿದೆ. ಪಕ್ಕದ ಕೇರಳದಿಂದ ವಿಶೇಷವಾದ ಹಲಸಿನ ಐಸ್‌ಕ್ರೀಂ ಹಾಗೂ ವೌಲ್ಯವರ್ಧಿತ ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.

ಶ್ರೀಧರ್ಮಸ್ಥಳ ಗ್ರಾಮೋದ್ಯೋಗ ಸಂಘದ ‘ಸಿರಿ’ ಮಳಿಗೆ, ವಿಶೇಷ ಖಾದಿ ಮಳಿಗೆದಾರರು, ಮನೆಯಲ್ಲೇ ತಯಾರಿಸಿದ ಗುಡಿ ಕೈಗಾರಿಕೆಯ ವಿವಿಧ ಉತ್ಪನ್ನಗಳು, ವಸ್ತುಗಳು ಹಾಗೂ ಇಳಕಲ್‌ನ ವಿಶಿಷ್ಟ ಸೀರೆಗಳು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಲೈನ್ಕಜೆ ರಾಮಚಂದ್ರ ವಿವರಿಸಿದರು.

ಇವುಗಳೊಂದಿಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಅಂತಾರಾಷ್ಟ್ರೀಯ ಖ್ಯಾತಿಯ ಜಾಕ್ ಅನಿಲ್ ಅವರ ಎರಡು ವರ್ಷಗಳಲ್ಲಿ ಫಲ ನೀಡುವ ಹಲಸಿನ ತಳಿಗಳೂ ಪ್ರದರ್ಶನಗೊಳ್ಳಲಿದೆ. ಉಡುಪಿ ಜಿಲ್ಲೆಯ ರೈತರು ಬೆಳೆದ ತರಕಾರಿ ಹಾಗೂ ಇತರ ಉತ್ಪನ್ನಗಳನ್ನು ಈ ಗ್ರಾಮೀಣ ಸತೆಯಲ್ಲಿ ಮಾರಾಟ ಮಾಡಲು ಅವಕಾಶಗಳಿವೆ. ಇದಕ್ಕಾಗಿ ದೂರವಾಣಿ ಸಂಖ್ಯೆ:9663376811 ಸಂಪರ್ಕಿಸುವರು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾವೀರ ಜೈನ್, ಸದಾಶಿವ ರಾವ್, ಅರವಿನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News