‘ಸಾಂಪ್ರದಾಯಿಕ ಬುಲ್‌ಟ್ರಾಲ್ ಮೀನುಗಾರಿಕೆಗೆ ಅವಕಾಶ ನೀಡಿ’

Update: 2018-09-12 12:49 GMT

ಉಡುಪಿ, ಸೆ.12: ಕಳೆದ 50 ವರ್ಷಗಳಿಂದ ಮೀನುಗಾರಿಕೆಯ ಪ್ರಾರಂಭಿಕ ಮೂರು ತಿಂಗಳು -ಸೆಪ್ಟಂಬರ್‌ನಿಂದ ನವೆಂಬರ್‌ವರೆಗೆ- ನಡೆಸಿಕೊಂಡು ಬರುತ್ತಿರುವ ಬುಲ್‌ಟ್ರಾಲ್ ಮೀನುಗಾರಿಕೆಗೆ ಮೀನು ಹಿಡಿಯಲು ಅವಕಾಶ ಮಾಡಿಕೊಡಬೇಕೆಂದು ಮಲ್ಪೆ ಟ್ರಾಲ್‌ಬೋಟ್ (370) ಮೀನುಗಾರರ ತಾಂಡೇಲರ ಸಂಘ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.

ಈ ಸಂಬಂಧ ಇಂದು ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಂಡೇಲರ ಸಂಘದ ಅಧ್ಯಕ್ಷ ಗಣೇಶ ಸುವರ್ಣ, ಈ ಸಂಘದಲ್ಲಿ ದುಡಿಯುವವರು ಸಣ್ಣ ಟ್ರಾಲ್‌ಬೋಟ್‌ನಲ್ಲಿ ದುಡಿಯುವ ಸ್ಥಳೀಯ ಕಾರ್ಮಿಕರಾಗಿದ್ದು, ಸರಕಾರ ಟ್ರಾಲ್‌ಬೋಟ್ ಮೀನುಗಾರಿಕೆಗೆ ನಿಷೇಧ ವಿಧಿಸಿರುವುದರಿಂದ ಇವರು ಉದ್ಯೋಗವಿಲ್ಲದೇ ಜೀವನ ಸಾಗಿಸುವುದೇ ದುಸ್ತರವಾಗಿದೆ ಎಂದರು.

ಈ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿರಿಯ ಮೀನುಗಾರರು ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರಲ್ಲಿ ಚರ್ಚಿಸದೇ ಏಕಾಏಕಿಯಾಗಿ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ನಿಷೇಧಿಸಿದೆ. ಇದರಿಂದ ಆಳ ಸಮುದ್ರದಲ್ಲಿ ಟ್ರಾಲ್‌ಬೋಟ್ ಮೀನುಗಾರರಿಕೆ ನಡೆಸುವ ದೊಡ್ಡ ಮೀನುಗಾರರು ಯಾವುದೇ ಸಮಸ್ಯೆ ಇಲ್ಲದೇ ತಮ್ಮ ಮೀನುಗಾರಿಕೆ ನಡೆಸುತಿದ್ದಾರೆ. ಆದರೆ 140 ಎಚ್‌ಪಿ ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಬಳಸಿ 12 ನಾಟಿಕಲ್ ಮೈಲ್ ಒಳಗೆ ಮೀನುಗಾರಿಕೆ ನಡೆಸುವ ನಮಗೆ ತೊಂದರೆಯಾಗಿದೆ ಎಂದರು.

ನಾವೀಗ ಮೀನುಗಾರಿಕೆ ನಡೆಸಲಾಗದೇ, ನಮ್ಮ ಕುಟುಂಬ ಉಪವಾಸದಲ್ಲಿ ರುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದ್ದು, ನಮ್ಮ ಬೋಟಿಗೆ ಮಾಡಿದ ಸಾಲದ ಕಂತು ಕಟ್ಟಲಾಗದೇ ನಾವೀಗ ತೀರಾ ಸಂಕಷ್ಟದಲ್ಲಿದ್ದೇವೆ ಎಂದು ಗಣೇಶ ಸುವರ್ಣ ನುಡಿದರು.

ನಾವು ಮೊದಲ ಮೂರು ತಿಂಗಳು ಮಾತ್ರ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತಿದ್ದೇವೆ. ಮಳೆಗಾಲ ಮುಗಿದ ತಕ್ಷಣ ಮೊದಲ ಮೂರು ತಿಂಗಳು ಸಮುದ್ರದ ತಳಮಟ್ಟದ ನೀರು ತಂಪಾಗಿರುವುದರಿಂದ ಮೀನು ನೀರಿನ ಮೇಲ್ಭಾಗದಲ್ಲೇ ಓಡಾಡುತ್ತಿರುತ್ತವೆ. ಈ ವೇಳೆ ಸಣ್ಣ ಟ್ರಾಲ್‌ಬೋಟ್‌ನವರಿಗೆ (140ಎಚ್‌ಪಿ ಅಶ್ವಸಾಮರ್ಥ್ಯದ) ಬುಲ್‌ಟ್ರಾಲ್ ಮೀನುಗಾರಿಕೆಯಿಂದ ಮಾತ್ರ ಈ ಮೀನುಗಳನ್ನು ಹಿಡಿಯಲು ಸಾಧ್ಯ. ಇದನ್ನು ನಾವು ಕಳೆದ 50 ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ ಎಂದು ಸಂಘದ ಹಿರಿಯ ಸಲಹೆಗಾರ ಭೋಜ ಸುವರ್ಣ ವಿವರಿಸಿದರು.

ಈ ಮೀನುಗಾರಿಕೆಗೆ ನಾವು ಇಲಾಖೆ ನೀಡಿರುವ ಬೋಟಿನಲ್ಲೇ, ಅವರು ನಿಗದಿ ಪಡಿಸಿದ ಬಲೆಯಲ್ಲೇ ಮೀನುಗಾರಿಕೆ ನಡೆಸುತಿದ್ದೇವೆ. ಇದು ಹಿರಿಯರು ನಡೆಸಿಕೊಂಡು ಬಂದ ಸಾಂಪ್ರದಾಯಿಕ ಮೀನುಗಾರಿಕೆಯೇ ಆಗಿದೆ. ಮೂರು ತಿಂಗಳು ಕಳೆದ ಬಳಿಕ ಮೀನುಗಳು ಸಮುದ್ರದ ತಳ ಭಾಗಕ್ಕಿಳಿಯಲಿದ್ದು ಆಗ ನಾವು ಒಂದೇ ಟ್ರಾಲ್‌ಬೋಟಿನಿಂದ ಮೀನುಗಾರಿಕೆ ನಡೆಸುತ್ತೇವೆ ಎಂದರು.

ಪರ್ಸಿನ್ ಬೋಟ್ ಹಾಗೂ ಆಳ ಸಮುದ್ರ ಟ್ರಾಲ್ ಬೋಟ್‌ನವರ ಜಗಳ ದಲ್ಲಿ ಇದೀಗ ಸಣ್ಣ ಬೋಟಿನೊಂದಿಗೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ನಮ್ಮ ಮೇಲೆ ಗಧಾಪ್ರಹಾರ ನಡೆದಿದೆ. ಮೀನುಗಾರಿಕಾ ಋತು ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ನಾವು ಮಾತ್ರ ಮೀನುಗಾರಿಕೆಗೆ ತೆರಳಲಾಗದೇ ಸಂಕಷ್ಟ ಅನುಭವಿಸುತಿದ್ದೇವೆ. ನಮಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಏಕಾಏಕಿ ನಿರ್ಬಂಧ ವಿಧಿಸಿದ್ದು ನಮಗೆ ದಿಕ್ಕೇ ತೋಚದಂತಾಗಿದೆ ಎಂದು ಗಣೇಶ ಸುವರ್ಣ ಹೇಳಿದರು.

ಕರಾವಳಿಯಲ್ಲಿ ಎಲ್ಲಾ ವಿಧದ ಮೀನುಗಾರಿಕೆಯಲ್ಲಿ ಅಕ್ರಮವಿದೆ ಎಂದ ಅರಿವು ಮೀನುಗಾರಿಕೆ ಇಲಾಖೆಗೆ ಚೆನ್ನಾಗಿ ಗೊತ್ತಿದ್ದರೂ, ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಸಣ್ಣ ಟ್ರಾಲ್‌ಬೋಟ್‌ಗಳ ಮೇಲೆ ಮಾತ್ರ ಇಲಾಖೆ ಏಕಾಏಕಿ ಕಾನೂನು ಜಾರಿಗೊಳಿಸಿದೆ ಎಂದು ಆರೋಪಿಸಿದರು.

ಕರಾವಳಿಯಲ್ಲಿ ನಾಡದೋಣಿ ಹಾಗೂ ಆಳಸಮುದ್ರ ಟ್ರಾಲ್‌ಬೋಟ್ ನವರು ಅಕ್ರಮ ಮೀನುಗಾರಿಕೆ ಮಾಡುತಿದ್ದಾರೆ. ಅವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ. ನಾಡದೋಣಿಗಳ ಇಂಜಿನ್‌ಗಳಿಗೆ (15ಎಚ್‌ಪಿಯೊಳಗಿನ) ನೀಡುವ ಸಬ್ಸಿಡಿ ಸೀಮೆಎಣ್ಣೆಯನ್ನು 40ಎಚ್‌ಪಿ ಇಂಜಿನ್‌ಗೆ ಹಾಕಿ ಅಕ್ರಮ ಮೀನುಗಾರಿಕೆ ಮಾಡುತ್ತಾರೆ. ನಾಡದೋಣಿಯನ್ನು ಯಾಂತ್ರೀಕೃತ ದೋಣಿಯಾಗಿಸಿ ಸರಕಾರದ ಕಣ್ಣಿಗೆ ಮಣ್ಣೆರಚುತ್ತಾರೆ. ಸಬ್ಸಿಡಿಯಲ್ಲಿ ದೊರೆತ ಸೀಮೆಎಣ್ಣೆಯನ್ನು ಕಾಳಸಂತೆಯಲ್ಲಿ 70-80ರೂ.ಗೆ ಮಾರಾಟ ಮಾಡಿ ಸರಕಾರಕ್ಕೆ ದ್ರೋಹ ಬಗೆಯುತ್ತಾರೆ. ಸರಕಾರದ ಆದೇಶ ಉಲ್ಲಂಘಿಸಿ ಸಣ್ಣ ಕಣ್ಣಿನ ಬಲೆ ಬಳಸಿ ಮರಿ ಮೀನುಗಳನ್ನು ಹಿಡಿಯುತ್ತಾರೆ. ಅಲ್ಲದೇ ಅವರು ಎರಡು ದೋಣಿಗಳನ್ನು ಬಳಸಿ ಬುಲ್‌ಟ್ರಾಲ್ ಮಾದರಿಯ ಮೀನುಗಾರಿಕೆ ನಡೆಸುತ್ತಾರೆ ಎಂದು ಆರೋಪಗಳ ಸುರಿಮಳೆಗೆರೆದರು.

ಟ್ರಾಲ್‌ಬೋಟ್‌ಗಳಲ್ಲಿ ಅಕ್ರಮ: ಇನ್ನು ಆಳಸಮುದ್ರ ಮೀನುಗಾರಿಕೆ ನಡೆಸುವ ಟ್ರಾಲ್‌ಬೋಟ್‌ಗಳು ಸರಕಾರದ ಆದೇಶದಂತೆ 350ಎಚ್‌ಪಿಗಿಂತ ಅಧಿಕ ಅಶ್ವಶಕ್ತಿಯ ಇಂಜಿನ್ ಬಳಸುವಂತಿಲ್ಲ. ಆದರೆ ಮಲ್ಪೆ ಬಂದರಿನಲ್ಲಿ 1200ಕ್ಕಿಂತ ಅಧಿಕ ಆಳಸಮುದ್ರ ಟ್ರಾಲ್‌ಬೋಟ್‌ಗಳು ಇದನ್ನು ಗಣನೆಗೆ ತೆಗೆದುಕೊಳ್ಳದೇ 420ರಿಂದ 505ಎಚ್‌ಪಿ ಅಶ್ವಶಕ್ತಿಯ ಇಂಜಿನ್‌ಗಳನ್ನು ಬಳಸಿ ಮೀನುಗಾರಿಕೆ ನಡೆಸುತ್ತಾರೆ. ಈಗ ಬುಲ್‌ಟ್ರಾಲ್ ಮೀನುಗಾರಿಕೆಗೆ ನಿಷೇದ ವಿಧಿಸಿರುವುದರಿಂದ ಅವು ಒಂದೇ ಬೋಟಿನಲ್ಲೂ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿದೆ ಎಂದರು.

ಬುಲ್‌ಟ್ರಾಲ್ ಮೀನುಗಾರಿಗೆ ನಿರ್ಬಂಧ ವಿಧಿಸಿರುವುದರಿಂದ ಈಗ ಸಾಂಪ್ರದಾಯಿಕ ಟ್ರಾಲ್ ಬೋಟ್ ಮೀನುಗಾರರಿಗೆ ತೊಂದರೆಯಾಗಿದೆ. ಆದುದರಿಂದ 140ಎಚ್‌ಪಿಗಿಂತ ಕೆಳಗಿನ ಸಾಮರ್ಥ್ಯದ ಟ್ರಾಲ್‌ಬೋಟ್ ಗಳಿಂದ ಮೊದಲ ಮೂರು ತಿಂಗಳು ಸಾಂಪ್ರದಾಯಿಕ ಬುಲ್‌ಟ್ರಾಲ್ ಮೀನುಗಾರಿಕೆಗೆ ರಿಯಾಯಿತಿ ನೀಡಬೇಕೆಂದು ಂಘ ಮನವಿ ಮಾಡುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪ್ರತಾಪ್ ಸಾಲ್ಯಾನ್, ಭೋಜ ಸುವರ್ಣ, ನಾಗರಾಜ ಬಿ.ಕುಂದರ್ ಹಾಗೂ ಕರುಣಾಕರ ಶ್ರೀಯಾನ್ ಉಪಸ್ಥಿ ತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News