ನಾರ್ತ್, ಸೌತ್ ಕ್ಯಾರಲೈನಗಳಿಂದ ಜನರ ಪಲಾಯನ

Update: 2018-09-12 16:07 GMT

ರೈಟ್ಸ್‌ವಿಲ್ ಬೀಚ್ (ಅಮೆರಿಕ), ಸೆ. 12: ‘ಫ್ಲಾರೆನ್ಸ್’ ಚಂಡಮಾರುತ ಅಮೆರಿಕದ ಪೂರ್ವ ಭಾಗದತ್ತ ಅತ್ಯಂತ ಶಕ್ತಿಶಾಲಿ ‘ಕೆಟಗರಿ 4’ ಬಿರುಗಾಳಿಯಾಗಿ ಧಾವಿಸುತ್ತಿರುವಂತೆಯೇ, ಅದರ ಮಾರ್ಗದಲ್ಲಿ ಬರುವ ನಾರ್ತ್ ಮತ್ತು ಸೌತ್ ಕ್ಯಾರಲೈನಗಳ ಜನರು ಸುರಕ್ಷಿತ ಸ್ಥಳಗಳತ್ತ ಓಡುತ್ತಿದ್ದಾರೆ.

‘ಫ್ಲಾರೆನ್ಸ್’ ದಶಕಗಳ ಅವಧಿಯಲ್ಲೇ ಅತ್ಯಂತ ಪ್ರಬಲ ಚಂಡಮಾರುತ ಎಂಬುದಾಗಿ ಬಣ್ಣಿಸಲಾಗಿದೆ.

 ಹೆಚ್ಚಿನ ಕರಾವಳಿ ನಿವಾಸಿಗಳು ಕಡ್ಡಾಯ ತೆರವು ಆದೇಶವನ್ನು ಪಾಲಿಸಿದರೆ, ಹಲವರು ತಮ್ಮ ಮನೆ ಅಥವಾ ಕಚೇರಿಗಳಲ್ಲೇ ಉಳಿದು ಚಂಡಮಾರುತವನ್ನು ಎದುರಿಸಲು ನಿರ್ಧರಿಸಿದ್ದಾರೆ.

ಚಂಡಮಾರುತವು ಕೆಲವು ಪ್ರದೇಶಗಳಲ್ಲಿ ಸುಮಾರು 90 ಸೆಂಟಿ ಮೀಟರ್ ಮಳೆಯನ್ನು ಸುರಿಸುವ ಸಾಧ್ಯತೆಯಿದೆ. ಹಾಗಾಗಿ, ಚಂಡಮಾರುತದ ಮಾರ್ಗದಲ್ಲಿ ದಿಢೀರ್ ಪ್ರವಾಹ ತಲೆದೋರಲಿದೆ. ನಾರ್ತ್ ಮತ್ತು ಸೌತ್ ಕ್ಯಾರಲೈನ ಹಾಗೂ ವರ್ಜೀನಿಯಗಳ ಸುಮಾರು 17 ಲಕ್ಷ ಜನರಿಗೆ ಮನೆಗಳನ್ನು ತೆರವುಗೊಳಿಸುವಂತೆ ಆದೇಶ ನೀಡಲಾಗಿದೆ.

ವಾಶಿಂಗ್ಟನ್‌ನಲ್ಲಿ ತುರ್ತು ಪರಿಸ್ಥಿತಿ

‘ಫ್ಲಾರೆನ್ಸ್’ ಚಂಡಮಾರುತವು ಅಮೆರಿಕದ ಪೂರ್ವ ಕರಾವಳಿಯತ್ತ ಧಾವಿಸಿ ಬರುತ್ತಿರುವಂತೆಯೇ, ವಾಶಿಂಗ್ಟನ್ ಮೇಯರ್ ಮಂಗಳವಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ತುರ್ತು ಪರಿಸ್ಥಿತಿಯನ್ನು ತಕ್ಷಣದಿಂದ ಜಾರಿಗೊಳಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ ಮೇಯರ್ ಮ್ಯೂರಿಯಲ್ ಬೌಸರ್, ಚಂಡಮಾರುತವನ್ನು ಎದುರಿಸಲು ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಈ ಕ್ರಮ ನೆರವು ನೀಡಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News