ಶರೀಫ್, ಪುತ್ರಿ, ಅಳಿಯನಿಗೆ 12 ಗಂಟೆಗಳ ಪರೋಲ್

Update: 2018-09-12 16:17 GMT

ಲಾಹೋರ್, ಸೆ. 12: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪತ್ನಿ ಬೇಗಮ್ ಕುಲ್ಸೂಮ್ ನವಾಝ್‌ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪ್ರಸಕ್ತ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರುವ ಶರೀಫ್, ಮಗಳು ಮರ್ಯಮ್ ಮತ್ತು ಅಳಿಯ ಮುಹಮ್ಮದ್ ಸಫ್ದರ್‌ಗೆ ಬುಧವಾರ 12 ಗಂಟೆಗಳ ಪರೋಲ್ ನೀಡಲಾಗಿದೆ.

ಪರೋಲ್ ಲಭಿಸಿದ ಬಳಿಕ ಅವರು ಲಾಹೋರ್‌ಗೆ ಬಂದಿದ್ದಾರೆ.

68 ವರ್ಷದ ಕುಲ್ಸೂಮ್ ಕ್ಯಾನ್ಸರ್‌ನೊಂದಿಗೆ ದೀರ್ಘ ಕಾಲ ಸೆಣಸಿದ ಬಳಿಕ ಮಂಗಳವಾರ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.

ಅವರ ಪಾರ್ಥಿವ ಶರೀರವನ್ನು ಲಾಹೋರ್‌ಗೆ ತರಲಾಗುವುದು ಹಾಗೂ ಶರೀಫ್ ಕುಟುಂಬದ ನಿವಾಸದಲ್ಲಿ ದಫನ ಮಾಡಲಾಗುವುದು.

ಪಂಜಾಬ್ ಸರಕಾರದ ಗೃಹ ಇಲಾಖೆಯು 12 ಗಂಟೆಗಳ ಪರೋಲ್ ಮಂಜೂರು ಮಾಡಿದ ಬಳಿಕ, ಶರೀಫ್, ಅವರ ಪುತ್ರಿ ಮತ್ತು ಅಳಿಯನನ್ನು ಮುಂಜಾನೆ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಿಂದ ವಿಶೇಷ ವಿಮಾನದಲ್ಲಿ ಶರೀಫ್ ಕುಟುಂಬದ ‘ಜತಿ ಉಮ್ರಾ’ ನಿವಾಸಕ್ಕೆ ಕರೆತರಲಾಯಿತು.

ಅವರು ಬುಧವಾರ ಮುಂಜಾನೆ 3:15ಕ್ಕೆ ತಮ್ಮ ನಿವಾಸವನ್ನು ತಲುಪಿದರು.

ಶರೀಫ್, ಅವರ ಪುತ್ರಿ ಮತ್ತು ಅಳಿಯನಿಗೆ 5 ದಿನಗಳ ಪರೋಲ್ ನೀಡುವಂತೆ ಶರೀಫ್ ಸಹೋದರ ಶಹಬಾಝ್ ಖಾನ್ ಪಂಜಾಬ್ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರಾದರೂ, ಸರಕಾರ ಕೇವಲ 12 ಗಂಟೆಗಳ ಪರೋಲ್ ನೀಡಿದೆ.

ಕುಲ್ಸೂಮ್ ಪಾರ್ಥಿವ ಶರೀರ ನಾಳೆ ಪಾಕ್‌ಗೆ

ಲಂಡನ್‌ನಲ್ಲಿ ಮಂಗಳವಾರ ನಿಧನರಾದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪತ್ನಿ ಕುಲ್ಸೂಮ್ ನವಾಝ್‌ರ ಪಾರ್ಥಿವ ಶರೀರವನ್ನು ಶುಕ್ರವಾರ ಪಾಕಿಸ್ತಾನಕ್ಕೆ ತರಲಾಗುವುದು.

ಲಂಡನ್‌ನ ರೀಜಂಟ್ ಪಾರ್ಕ್ ಇಸ್ಲಾಮಿಕ್ ಸೆಂಟರ್‌ನಲ್ಲಿ ಗುರುವಾರ ಬೇಗಮ್ ಕುಲ್ಸೂಮ್‌ಗಾಗಿ ಪ್ರಾರ್ಥಿಸಲಾಗುವುದು ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷ ಬುಧವಾರ ಟ್ವಿಟರ್‌ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News