ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಪ್ರಸ್ತಾಪ: ಭಾರತ ವಿಷಾದ

Update: 2018-09-12 16:37 GMT

ವಿಶ್ವಸಂಸ್ಥೆ, ಸೆ. 12: ಕಾಶ್ಮೀರ ವಿಷಯವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದಲ್ಲಿ ಪ್ರಸ್ತಾಪಗೊಂಡಿರುವುದಕ್ಕೆ ಭಾರತ ವಿಷಾದ ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದಲ್ಲಿ ಮಾತನಾಡಿದ ಅದರ ಹೈಕಮಿಶನರ್ ಮಿಚೆಲ್ ಬ್ಯಾಚಲೆಟ್ ಕಾಶ್ಮೀರ ಬಗ್ಗೆ ಪ್ರಸ್ತಾಪಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಮಾನವಹಕ್ಕುಗಳ ಪರಿಸ್ಥಿತಿ ಕುರಿತ ಮಾನವಹಕ್ಕುಗಳ ಮಂಡಳಿಯ ಇತ್ತೀಚಿನ ವರದಿಯನ್ನು ಅರ್ಥಪೂರ್ಣ ಸುಧಾರಣೆಗಳೊಂದಿಗೆ ಅನುಸರಿಸಲಾಗಿಲ್ಲ ಹಾಗೂ ಬೆಟ್ಟು ಮಾಡಲಾದ ಗಂಭೀರ ವಿಷಯಗಳನ್ನು ಯಾವ ರೀತಿಯಲ್ಲಿ ಪರಿಹರಿಸಬಹುದು ಎಂಬ ಬಗ್ಗೆಯೂ ಮುಕ್ತ ಹಾಗೂ ಗಂಭೀರ ಚರ್ಚೆಗಳಾಗಿಲ್ಲ’’ ಎಂದು ಬ್ಯಾಚಲೆಟ್ ಹೇಳಿದ್ದರು.

‘‘ನ್ಯಾಯ ಪಡೆಯುವ ಹಾಗೂ ಘನತೆಯಿಂದ ಜೀವಿಸುವ ಹಕ್ಕು ಜಗತ್ತಿನ ಎಲ್ಲ ಕಡೆಯಲ್ಲಿರುವ ಜನರಂತೆ ಕಾಶ್ಮೀರದ ಜನರಿಗೂ ಇದೆ. ಅದನ್ನು ಗೌರವಿಸುವಂತೆ ಅಧಿಕಾರಿಗಳನ್ನು ನಾವು ಒತ್ತಾಯಿಸುತ್ತೇವೆ. ನಿಯಂತ್ರಣ ರೇಖೆಯ ಎರಡೂ ಕಡೆಗಳಿಗೆ ಭೇಟಿ ನೀಡುವ ಅನುಮತಿಗಾಗಿ ಕೋರಿಕೆ ಸಲ್ಲಿಸುವುದನ್ನು ನನ್ನ ಕಚೇರಿ ಮುಂದುವರಿಸಲಿದೆ ಹಾಗೂ ಅದರ ನಡುವೆ, ನಿಗಾ ಮತ್ತು ವರದಿ ಮಾಡುವುದನ್ನು ಮುಂದುವರಿಸಲಾಗುವುದು’’ ಎಂದಿದ್ದರು.

ಭಾರತದ ಪ್ರತಿಕ್ರಿಯೆ

ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಶನರ್ ಮಿಚೆಲ್ ಬ್ಯಾಚಲೆಟ್ ನೀಡಿರುವ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ ಜಿನೇವದಲ್ಲಿರುವ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರಾಜೀವ್ ಚಂದ್ರ, ಈ ವಿಷಯ ಕುರಿತ ನಿಲುವನ್ನು ಭಾರತ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಹೇಳಿದರು.

‘‘ಮೇಡಂ ಹೈಕಮಿಶನರ್, ಇದು ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿ ಸೇರಿದಂತೆ ಸಂಬಂಧಿತ ಎಲ್ಲರಿಗೂ ಕಠಿಣ ಸಮಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದುದರಿಂದ, ಮಾನವಹಕ್ಕು ವಿಷಯಗಳನ್ನು, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಮನ್ನಿಸಿ ಪಾರದರ್ಶಕ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ರಚನಾತ್ಮಕವಾಗಿ ಪರಿಹರಿಸಬೇಕು’’ ಎಂದು ರಾಜೀವ್ ಚಂದ್ರ ಹೇಳಿದ್ದಾರೆ.

‘‘ಭಾರತದ ರಾಜ್ಯ ಜಮ್ಮು ಮತ್ತು ಕಾಶ್ಮೀರವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಪ್ರಸ್ತಾಪಗೊಂಡಿರುವುದಕ್ಕೆ ನಾವು ವಿಷಾದಿಸುತ್ತೇವೆ. ಈ ವಿಷಯದ ಕುರಿತ ನಮ್ಮ ನಿಲುವನ್ನು ಮಂಡಳಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಲಾಗಿದೆ’’ ಜಿನೇವದಲ್ಲಿ ಮಂಗಳವಾರ ನಡೆದ ಮಾನವಹಕ್ಕುಗಳ ಮಂಡಳಿಯ 39ನೇ ಅಧಿವೇಶನದಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News