ಕ್ರೊಯೇಶಿಯಾಗೆ ಸೋಲುಣಿಸಿದ ಸ್ಪೇನ್

Update: 2018-09-12 18:18 GMT

ಎಲ್ಶೆ(ಸ್ಪೇನ್), ಸೆ.12: ಇಲ್ಲಿ ನಡೆಯುತ್ತಿರುವ ಯುಇಎಫ್‌ಎ ನೇಶನ್ಸ್ ಲೀಗ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆತಿಥೇಯ ಸ್ಪೇನ್ ತಂಡ ಕ್ರೊಯೇಶಿಯಾವನ್ನು 6-0 ಅಂತರದಲ್ಲಿ ಮಣಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಕ್ರೊಯೇಶಿಯಾ ಇತ್ತೀಚೆಗೆ ನಡೆದ ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಪ್ರಶಸ್ತಿ ಎತ್ತುವಲ್ಲಿ ವಿಫಲವಾಗಿ ದ್ವಿತೀಯ ಸ್ಥಾನ ಪಡೆದಿತ್ತು. ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಪೇನ್ 16ರ ಹಂತದಲ್ಲೇ ಸೋತು ಹೊರನಡೆದಿತ್ತು. ಈ ಸೋಲಿನಿಂದಾಗಿ ಸ್ಪೇನ್ ತರಬೇತುದಾರ ಜುಲೆನ್ ಲೊಪೆಟೆಗಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳಬೇಕಾಗಿ ಬಂದಿತ್ತು. ನಂತರ ಈ ಸ್ಥಾನಕ್ಕೆ ಮಾಜಿ ಆಟಗಾರ ಲೂಯಿಸ್ ಎನ್ರಿಕಿಯನ್ನು ನೇಮಕ ಮಾಡಲಾಗಿತ್ತು. ಸದ್ಯ ಎನ್ರಿಕಿ ಸಾರಥ್ಯದಲ್ಲಿ ಸ್ಪೇನ್ ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಗೆಲುವು ಸಾಧಿಸಿದೆ. ಸ್ಪೇನ್ ಗೆಲುವಿನಲ್ಲಿ ಮಾರ್ಕೊ ಅಸೆನ್ಸಿಯೊ ಪ್ರಮುಖ ಪಾತ್ರವಹಿಸಿದರು. ಅಸೆನ್ಸಿಯೊ ಒಂದು ಗೋಲು ಬಾರಿಸಿದ್ದಲ್ಲದೆ ತಂಡದ ಇತರ ಆಟಗಾರರು ಮೂರು ಗೋಲು ಬಾರಿಸುವಲ್ಲಿ ನೆರವಾದರು. ಅಸೆನ್ಸಿಯೊ ಸಾಹಸದಿಂದ ಮೊದಲಾರ್ಧದಲ್ಲಿ ಸ್ಪೇನ್ ಮೂರು ಗೋಲುಗಳನ್ನು ಬಾರಿಸಿ ಬೀಗಿತ್ತು. ಸ್ಪೇನ್ ಪರವಾಗಿ ಸೌಲ್ ನಿಗೇಝ್ ಮೊದಲ ಗೋಲು ಬಾರಿಸಿದರು. ನಂತರ ಅಸೆನ್ಸಿಯೊ, ಲೊವ್ರೆ ಕಲಿನಿಕ್, ರೋಡ್ರಿಗೊ, ಸರ್ಗಿಯೊ ರಮೊಸ್ ಮತ್ತು ಇಸ್ಕೊ ಕ್ರಮವಾಗಿ ತಲಾ ಒಂದು ಗೋಲು ಬಾರಿಸಿದರು. ಸ್ಪೇನ್ ಗೆಲುವಿನ ನಾಗಾಲೋಟದ ಮುಂದೆ ಕ್ರೊಯೇಶಿಯಾ ಮಂಕಾಗಿತ್ತು. ಪಂದ್ಯದ ಆರಂಭದಿಂದಲೂ ತಮ್ಮ ಗೋಲ್ ಪಾಯಿಂಟ್‌ನತ್ತ ಧಾವಿಸಿ ಬರುತ್ತಿದ್ದ ಸ್ಪೇನ್ ಆಟಗಾರರನ್ನು ತಡೆಯಲು ಕ್ರೊಯೇಶಿಯಾ ಪರದಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News