ಉತ್ತರ ಪ್ರದೇಶ: ಹಸಿವು, ಅಪೌಷ್ಠಿಕತೆಯಿಂದ ತಾಯಿ, ಇಬ್ಬರು ಮಕ್ಕಳು ಮೃತ್ಯು

Update: 2018-09-13 10:47 GMT

ಲಕ್ನೋ, ಸೆ.13: ಹಸಿವು ಮತ್ತು ಅಪೌಷ್ಠಿಕತೆಯಿಂದ ತಾಯಿ ಮತ್ತು ಇಬ್ಬರು ಮಕ್ಕಳು ವಾರದೊಳಗೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ. ಸಾವಿಗೆ ಅತಿಸಾರವೇ ಕಾರಣ ಎಂದು ಸರಕಾರಿ ಅಧಿಕಾರಿಗಳು ಹೇಳಿದ್ದರೂ ಗ್ರಾಮಸ್ಥರು ಬೇರೆಯದೇ ಕಥೆಯನ್ನು ಹೇಳುತ್ತಾರೆ.

ಪರಿಶಿಷ್ಟ ಜಾತಿಗೆ ಸೇರಿದ ಮುಸಾಹರ ಸಮುದಾಯದವರಾಗಿದ್ದಾರೆ ಮೃತರು. 30 ವರ್ಷದ ಸಂಗೀತ ಹಾಗು ಆಕೆಯ 8 ವರ್ಷ ಪ್ರಾಯದ ಪುತ್ರ ಸೂರಜ್ ಸೆಪ್ಟಂಬರ್ 7ರಂದು ಮೃತಪಟ್ಟಿದ್ದರು. ತಾಯಿ ಮತ್ತು ಮಗು ಮುಂಜಾನೆ 7 ಗಂಟೆಯ ಸುಮಾರಿಗೆ ವಾಂತಿ ಮಾಡಲು ಆರಂಭಿಸಿದ್ದರು. ಇಬ್ಬರ ಸ್ಥಿತಿ ಗಂಭೀರವಾದಾಗ ಸರಕಾರಿ ಆ್ಯಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಮಹಿಳೆಯ ಪತಿ ವಿರೇಂದ್ರ ಹೇಳುತ್ತಾರೆ.

ಆದರೆ ಬೇರೆ ಆಸ್ಪತ್ರೆಗೆ ದಾಖಲಿಸಬೇಕೆಂದು ವೈದ್ಯರು ಹೇಳಿದ್ದು, ಬೇರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಇಬ್ಬರು ಮೃತಪಟ್ಟಿದ್ದರು ಎನ್ನಲಾಗಿದೆ. ಇದಾಗಿ 5 ದಿನಗಳಲ್ಲಿ ಸಂಗೀತಾರ ಕೊನೆಯ ಪುತ್ರಿ ಎರಡು ತಿಂಗಳು ಪ್ರಾಯದ ಗೀತಾ ಕೂಡ ಮೃತಪಟ್ಟಿದ್ದಾಳೆ.

ಮಗುವನ್ನು ಪೌಷ್ಠಿಕಾಂಶ ಕೇಂದ್ರಕ್ಕೆ ಕರೆದೊಯ್ಯುವಂತೆ ಸಾಮಾಜಿಕ ಕಾರ್ಯಕರ್ತರು ಗ್ರಾಮಾಡಳಿತದಲ್ಲಿ ಮನವಿ ಮಾಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಕೆಲ ವರದಿಗಳು ಹೇಳುತ್ತಿವೆ. ಇವರದ್ದು ಬಡ ಕುಟುಂಬವಾಗಿತ್ತು. ಆದರೆ ಹಸಿವು ಸಾವಿಗೆ ಕಾರಣವಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News