ತಟರಕ್ಷಣಾ ಪಡೆಯ ‘ವಿಜಯಾ’ ಗಸ್ತು ನೌಕೆಯ ಕಾರ್ಯಾರಂಭ

Update: 2018-09-14 13:19 GMT

ಚೆನ್ನೈ, ಸೆ.14: ಭಾರತೀಯ ತಟರಕ್ಷಣಾ ಪಡೆಯು ಸ್ವದೇಶಿ ನಿರ್ಮಿತ,ಅತ್ಯಾಧುನಿಕ ಮಾರ್ಗದರ್ಶನ ಮತ್ತು ಸಂವಹನ ಉಪಕರಣಗಳಿಂದ ಸುಸಜ್ಜಿತಗೊಂಡಿರುವ ತನ್ನ ನೂತನ ‘ವಿಜಯಾ’ ಗಸ್ತು ನೌಕೆಯನ್ನು ಶುಕ್ರವಾರ ಇಲ್ಲಿ ಕಾರ್ಯಾರಂಭಗೊಳಿಸಿತು.

98 ಮೀ.ಉದ್ದದ ಈ ನೌಕೆಯುನ್ನು ಒಡಿಶಾದ ಪಾರದೀಪ್‌ನಲ್ಲಿ ನೆಲೆಗೊಳಿಸಲಾಗುತ್ತಿದ್ದು,ಅದು ವಿಶೇಷ ಆರ್ಥಿಕ ವಲಯದಲ್ಲಿ ಕರ್ತವ್ಯ ನಿರ್ವಹಿಸಲಿದೆ. ಸಮುದ್ರದಲ್ಲಿ ತೈಲ ಸೋರಿಕೆಯು ಹರಡುವುದನ್ನು ತಡೆಯಲು ಅಗತ್ಯ ಉಪಕರಣಗಳನ್ನು ಹೊಂದಿರುವ ‘ವಿಜಯಾ’ದಲ್ಲಿ ಅಗ್ನಿ ನಿಯಂತ್ರಣ ವ್ಯವಸ್ಥೆಯೊಂದಿಗೆ 30 ಎಂಎಂ ಗನ್ ಅಳವಡಿಸಲಾಗಿದೆ.

ಕಮಾಂಡರ್ ಹರಿಂದರ್ ಜೀತ್ ಸಿಂಗ್ ಅವರು ನೌಕೆಯ ನೇತೃತ್ವ ವಹಿಸಲಿದ್ದು,12 ಅಧಿಕಾರಿಗಳು ಮತ್ತು 91 ಸಿಬ್ಬಂದಿಗಳು ನೌಕೆಯಲ್ಲಿರುತ್ತಾರೆ.

ಒಂದು ಜೋಡಿ ಇಂಜಿನ್‌ನ ಹೆಲಿಕಾಪ್ಟರ್ ಮತ್ತು ನಾಲ್ಕು ಹೈಸ್ಪೀಡ್ ಬೋಟ್‌ಗಳನ್ನು ಸಾಗಿಸಲು ಸಾಧ್ಯವಾಗುವಂತೆ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ.

ಭಾರತೀಯ ತಟ ರಕ್ಷಣಾ ಪಡೆಯು ಹಾಲಿ 137 ನೌಕೆಗಳು ಮತ್ತು 62 ವಿಮಾನಗಳನ್ನು ಹೊಂದಿದ್ದು,ಇನ್ನೂ 61 ನೌಕೆಗಳು ಭಾರತೀಯ ಶಿಪ್‌ಯಾಡ್‌ಗಳಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News