ಟ್ರಂಪ್ ಆಯ್ಕೆಯಿಂದ ಆತಂಕಗೊಂಡಿದ್ದ ಗೂಗಲ್ ಮುಖ್ಯಸ್ಥ

Update: 2018-09-14 13:48 GMT

ಸ್ಯಾನ್‌ಫ್ರಾನ್ಸಿಸ್ಕೊ, ಸೆ. 14: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಗೊಂಡಿರುವುದರಿಂದ ನಾವು ಎಷ್ಟು ಆತಂಕಿತರಾಗಿದ್ದೇವೆ ಎನ್ನುವುದನ್ನು ಗೂಗಲ್ ಅಧಿಕಾರಿಗಳು ಉದ್ಯೋಗಿಗಳಿಗೆ ವಿವರಿಸುವ ವೀಡಿಯೊವೊಂದನ್ನು ಬಲಪಂಥೀಯ ಸುದ್ದಿ ವೆಬ್‌ಸೈಟ್ ‘ಬ್ರೇಟ್‌ಬಾರ್ಟ್’ ಬುಧವಾರ ಪ್ರಸಾರಿಸಿದೆ.

2016 ನವೆಂಬರ್‌ನಲ್ಲಿ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ, ನಡೆದ ಸಭೆಯ ಒಂದು ಗಂಟೆ ಅವಧಿಯ ವೀಡಿಯೊ ಅದಾಗಿತ್ತು.

 ಸರ್ಚ್ ಇಂಜಿನ್ ಗೂಗಲ್ ಸಂಪ್ರದಾಯವಾದಿ ರಾಜಕೀಯ ನಿಲುವುಗಳ ವಿರುದ್ಧ ಪಕ್ಷಪಾತ ತೋರುತ್ತಿದೆ ಎಂಬುದಾಗಿ ಟ್ರಂಪ್ ಮತ್ತು ಅವರ ಬೆಂಬಲಿಗರು ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ‘‘ಇದು ಅತ್ಯಂತ ಸಂತಸದ ಸಭೆ ಅಲ್ಲ ಎನ್ನುವುದು ನನಗೆ ಗೊತ್ತಿದೆ’’ ಎಂದು ಗೂಗಲ್ ಸಹ ಸಂಸ್ಥಾಪಕ ಸರ್ಗಿ ಬ್ರಿನ್ ವೀಡಿಯೊದಲ್ಲಿ ಹೇಳುತ್ತಾರೆ.

‘‘ಈ ಚುನಾವಣೆ ಅತ್ಯಂತ ಕೆಟ್ಟದಾಗಿ ನಡೆದಿದೆ ಎಂಬುದಾಗಿ ಓರ್ವ ವಲಸಿಗ ಮತ್ತು ನಿರಾಶ್ರಿತನಾಗಿ ನಾನು ಭಾವಿಸುತ್ತೇನೆ. ನಿಮ್ಮಲ್ಲಿ ಹೆಚ್ಚಿನವರು ಇದೇ ರೀತಿಯ ಭಾವನೆ ಹೊಂದಿದ್ದಾರೆ ಎನ್ನುವುದೂ ನನಗೆ ಗೊತ್ತು’’ ಎಂದು ಅವರು ಹೇಳಿದ್ದಾರೆ.

ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮೇಲೆ ನಂಬಿಕೆಯಿಡಬೇಕು: ಸುಂದರ್ ಪಿಚೈ

ಗೂಗಲ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಂದರ್ ಪಿಚೈ ಕೂಡ ಈ ಸಭೆಯಲ್ಲಿ ಮಾತನಾಡಿದ್ದಾರೆ.

‘‘ಚುನಾವಣೆಯು ಭಾವಾವೇಶದ ಮಾತುಗಳಿಂದ ತುಂಬಿತ್ತು ಮತ್ತು ವಿಭಜನಕಾರಿಯಾಗಿತ್ತು ಎನ್ನುವುದೇನೋ ಸರಿ. ಆದರೆ, ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೇಲೆ ನಂಬಿಕೆಯಿಡಬೇಕು’’ ಎಂದು ಅವರು ಹೇಳಿದ್ದಾರೆ.

‘‘ಜನರಲ್ಲಿ ತುಂಬಾ ಹೆದರಿಕೆಯಿದೆ. ಅವರ ಹೆದರಿಕೆಯನ್ನು ಹೋಗಲಾಡಿಸುವುದು ಮುಖ್ಯ’’ ಎಂದು ಪಿಚೈ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News