ಉತ್ತರ ಪ್ರದೇಶದಲ್ಲಿ ನಿಗೂಢ ಜ್ವರಕ್ಕೆ 42 ಬಲಿ

Update: 2018-09-14 15:31 GMT

ಬರೇಲಿ, ಸೆ.14: ಶುಕ್ರವಾರ ಬದೌನ್ ಮತ್ತು ಶಹಜಹನ್‌ಪುರದಲ್ಲಿ ತಲಾ ಮೂರು ಮಂದಿ ಸಾವನ್ನಪ್ಪುವ ಮೂಲಕ ಉತ್ತರ ಪ್ರದೇಶದ ಬರೇಲಿಯಲ್ಲಿ ಹರಡುತ್ತಿರುವ ನಿಗೂಢ ಜ್ವರಕ್ಕೆ ಈವರೆಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರೇಲಿ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ಇಪ್ಪತ್ತು ಮಂದಿ ಈ ಜ್ವರದಿಂದ ಮೃತಪಟ್ಟಿದ್ದಾರೆ. ಬದೌನ್‌ನಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರಕವಾಗಿ ಪರಿಣಮಿಸಿರುವ ಜ್ವರದ ಬಗ್ಗೆ ಪರಿಶೀಲನೆ ನಡೆಸಲು ಸರಕಾರ ವೈದ್ಯರ ಮೂರು ತಂಡಗಳನ್ನು ರಚಿಸಿರುವುದಾಗಿ ಉತ್ತರ ಪ್ರದೇಶ ಜಿಲ್ಲಾ ಆರೋಗ್ಯಾಧಿಕಾರಿ ಪದ್ಮಾಕರ್ ಸಿಂಗ್ ತಿಳಿಸಿದ್ದಾರೆ. ಕೇಂದ್ರದ ಐದು ಸದಸ್ಯರ ತಂಡ ಕೂಡಾ ಜಿಲ್ಲೆಗೆ ಆಗಮಿಸಿದ್ದು ನಿಯಂತ್ರಣ ಮತ್ತು ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಹಲವೆಡೆ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಜಿಲ್ಲೆಯಾದ್ಯಂತ ಫಾಗಿಂಗ್ ಮತ್ತು ಸೊಳ್ಳೆ ನಿವಾರಕ ಸ್ಪ್ರೇಗಳನ್ನು ಸಿಂಪಡಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News