ರೂಪಾಯಿ ಕುಸಿತ, ತೈಲ ಬೆಲೆಯೇರಿಕೆ: ಪರಿಶೀಲನೆಗೆ ಮುಂದಾದ ಪ್ರಧಾನಿ ಮೋದಿ

Update: 2018-09-14 17:30 GMT

ಹೊಸದಿಲ್ಲಿ, ಸೆ.14: ರೂಪಾಯಿ ಮೌಲ್ಯ ಕುಸಿತ ಮತ್ತು ತೈಲ ಬೆಲೆಯೇರಿಕೆ ಸೇರಿದಂತೆ ಇತರ ಆರ್ಥಿಕ ಸಮಸ್ಯೆಗಳ ನಿವಾರಣೆ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪರಿಶೀಲನಾ ಸಭೆಯನ್ನು ಶುಕ್ರವಾರ ಆರಂಭಿಸಿದ್ದಾರೆ.

ಈ ಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಸೇರಿದಂತೆ ಇತರ ಪ್ರಮುಖ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಫ್ತನ್ನು ಹೆಚ್ಚಿಸಲು ಕ್ರಮ ಮತ್ತು ನಿರಂತರ ಕುಸಿತಕ್ಕೊಳಗಾಗುತ್ತಿರುವ ರೂಪಾಯಿ ಮೌಲ್ಯವನ್ನು ನಿಯಂತ್ರಿಸಲು ಬಡ್ಡಿ ದರದಲ್ಲಿ ಏರಿಕೆ ಇತ್ಯಾದಿ ಹಲವು ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೂಪಾಯಿ ಮೌಲ್ಯ ಈ ವಾರ ಡಾಲರ್ ವಿರುದ್ಧ ದಾಖಲೆಯ 72ಕ್ಕೆ ತಪುಪಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಹೊಸ ದಾಖಲೆ ಮಟ್ಟಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಏರುತ್ತಿರುವ ತೈಲಬೆಲೆಯನ್ನು ಕಡಿಮೆ ಮಾಡಲು ತೆರಿಗೆಯನ್ನು ಕಡಿತಗೊಳಿಸುವ ಯಾವುದೇ ಚಿಂತನೆಯಿಲ್ಲ ಎಂದು ವಿತ್ತ ಸಚಿವಾಲಯ ತಿಳಿಸಿದೆ.

ಸದ್ಯ ತನ್ನ ಆದಾಯವನ್ನು ಕಡಿತಗೊಳಿಸುವ ಸ್ಥಿತಿಯಲ್ಲಿ ಸರಕಾರವಿಲ್ಲ ಎಂದು ಅದು ತಿಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ಒಂದು ರೂ. ತೆರಿಗೆ ಕಡಿತ ಮಾಡಿದರೂ ಸರಕಾರದ ಬೊಕ್ಕಸಕ್ಕೆ 30,000 ಕೋಟಿ ರೂ. ಆದಾಯ ನಷ್ಟವಾಗುತ್ತದೆ ಎಂದು ಸಚಿವಾಲಯ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News