336 ಕೋಟಿಯಲ್ಲಿ ಒಂದು ರೂ. ಕೂಡ ಬಳಕೆ ಮಾಡದ ಆದಿತ್ಯನಾಥ್ ಸರಕಾರ !: ಆರ್ ಟಿಐ ಮಾಹಿತಿಯಿಂದ ಬಹಿರಂಗ

Update: 2018-09-14 17:33 GMT

ಹೊಸದಿಲ್ಲಿ, ಸೆ.14: ಪ್ರಧಾನಿ ಮೋದಿಯವರ ಮಹಾತ್ವಾಕಾಂಕ್ಷೆಯ ಯೋಜನೆಯಾಗಿರುವ ಪ್ರಧಾನಮಂತ್ರಿ ಮಾತೃತ್ವ ಯೋಜನೆಯಲ್ಲಿ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿರುವ ಉತ್ತರಪ್ರದೇಶಕ್ಕೆ ಹೆಚ್ಚಿನ ಮೊತ್ತವನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಇದುವರೆಗೆ ಒಂದು ರೂಪಾಯಿ ಮೊತ್ತ ಕೂಡಾ ವೆಚ್ಚ ಮಾಡಲಾಗಿಲ್ಲ ಎಂಬುದು ಮಾಹಿತಿ ಹಕ್ಕು ಅರ್ಜಿಯಿಂದ ತಿಳಿದುಬಂದಿದೆ.

ಪ್ರಧಾನಮಂತ್ರಿ ಮಾತೃತ್ವ ಯೋಜನೆಯ 2,049 ರೂ. ಮೊತ್ತದಲ್ಲಿ 2017-18ರಲ್ಲಿ ಉತ್ತರಪ್ರದೇಶಕ್ಕೆ 336 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಉ.ಪ್ರದೇಶದಲ್ಲಿ ಜನವರಿ 2017ರಿಂದ ಆಗಸ್ಟ್ 2018ರವರೆಗಿನ ಅವಧಿಯಲ್ಲಿ ಈ ಯೋಜನೆಯಡಿ ಕೇವಲ 184 ಮಹಿಳೆಯರು ನೋಂದಾವಣೆ ಮಾಡಿಕೊಂಡಿದ್ದರೆ ದೇಶದಾದ್ಯಂತ 717 ಜಿಲ್ಲೆಗಳಲ್ಲಿ ಒಟ್ಟು 44 ಲಕ್ಷ ಮಹಿಳೆಯರು ನೋಂದಾವಣೆ ಮಾಡಿಕೊಂಡಿದ್ದಾರೆ. ಇವರಲ್ಲಿ ದೇಶದಾದ್ಯಂತ 34 ಲಕ್ಷ ಮಹಿಳೆಯರು ಯೋಜನೆಯ ಲಾಭ ಪಡೆದುಕೊಂಡಿದ್ದರೆ, ಉತ್ತರಪ್ರದೇಶದಲ್ಲಿ ಒಬ್ಬರಿಗೂ ಹಣ ಪಾವತಿ ಮಾಡಿಲ್ಲ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಉತ್ತರದಿಂದ ತಿಳಿದು ಬಂದಿದೆ. ಉತ್ತರಪ್ರದೇಶದಲ್ಲಿ ಫಲವತ್ತತೆಯ ಪ್ರಮಾಣ( ಪ್ರತೀ ಮಹಿಳೆಗೆ ಇರುವ ಮಕ್ಕಳ ಪ್ರಮಾಣ) 3.1 ಆಗಿದ್ದು ಇದು ದೇಶದಲ್ಲೇ ಎರಡನೇ ಅತ್ಯಧಿಕ ಪ್ರಮಾಣವಾಗಿದೆ. ಬಿಹಾರದಲ್ಲಿ 3.3 ಪ್ರಮಾಣವಿದೆ ಎಂದು ನೀತಿ ಆಯೋಗದ ವರದಿ ತಿಳಿಸುತ್ತದೆ.

ಮಾತೃತ್ವ ಯೋಜನೆಯಡಿ ಪಂಜಾಬ್‌ನಲ್ಲಿ 7 ಮಹಿಳೆಯರು ನೋಂದಣೆ ಮಾಡಿಕೊಂಡಿದ್ದರೆ ಕೇವಲ 5 ಮಂದಿಗೆ ಹಣ ಪಾವತಿಯಾಗಿದೆ. ಪಂಜಾಬ್‌ಗೆ ಈ ಯೋಜನೆಯಡಿ 46.49 ಕೋಟಿ ರೂ. ಅನುದಾನ ದೊರೆತಿದೆ. ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಗೆ ಅತ್ಯಧಿಕ (6.8 ಲಕ್ಷ) ಮಹಿಳೆಯರು ನೋಂದಣೆ ಮಾಡಿಕೊಂಡಿದ್ದು ಇವರಲ್ಲಿ 5 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಕೇಂದ್ರವು ಪ.ಬಂಗಾಳಕ್ಕೆ 102 ಕೋಟಿ ರೂ. ಅನುದಾನ ನೀಡಿದೆ. ತಮಿಳುನಾಡಿನಲ್ಲಿ ಈ ಯೋಜನೆಯಡಿ ಒಂದೂ ಹೆಸರು ನೋಂದಣೆಯಾಗಿಲ್ಲ. ತಮಿಳುನಾಡಿಗೆ 2017-18ರಲ್ಲಿ 120 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಯುಪಿಎ ಸರಕಾರದ ದ್ವಿತೀಯ ಅವಧಿಯಲ್ಲಿ (2010ರಲ್ಲಿ) ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ ಎಂಬ ಹೆಸರಿನಲ್ಲಿ ಜಾರಿಗೊಂಡಿದ್ದ ಈ ಯೋಜನೆಗೆ 2016ರಲ್ಲಿ ಪ್ರಧಾನಮಂತ್ರಿ ಮಾತೃತ್ವ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ.

ಈ ಯೋಜನೆಯಡಿ ಆಸ್ಪತ್ರೆಯಲ್ಲಿ ಮಗು ಜನಿಸಿದ ಬಳಿಕ ತಾಯಿಗೆ 5,000 ರೂ. ಆರ್ಥಿಕ ನೆರವು ನೀಡಲಾಗುವುದು. ಬಳಿಕ 1,000 ರೂ. ಹಣವನ್ನು ಜನನಿ ಸುರಕ್ಷಾ ಯೋಜನೆಯಡಿ ಮಾತೃತ್ವ ಪ್ರಯೋಜನ ಎಂದು ನೀಡಲಾಗುವುದು. ಆದರೆ ಈ ಯೋಜನೆಯಡಿ ನೋಂದಣೆಯಾಗುವ ಮಹಿಳೆಯರು ಆಧಾರ್ ಕಾರ್ಡ್ ಹೊಂದಿರಬೇಕು ಎಂಬ ನಿಯಮವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News