ಏಶ್ಯನ್ ಗೇಮ್ಸ್‌ ಚಾಂಪಿಯನ್ ಸ್ವಪ್ನಾಗೆ ಒಪ್ಪುವಂತಹ ಶೂ ಒದಗಿಸಲಿರುವ ಸಾಯ್

Update: 2018-09-14 18:25 GMT

ಹೊಸದಿಲ್ಲಿ, ಸೆ.14: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಸ್ವಪ್ನಾ ಬರ್ಮನ್‌ರ 12 ಬೆರಳಿನ ಪಾದಕ್ಕೆ ಒಪ್ಪುವಂತಹ ಶೂ ಒದಗಿಸಲು ಮುಂದಾಗಿರುವ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಪಾದರಕ್ಷೆ ಕಂಪೆನಿ ಅಡಿಡಾಸ್‌ನೊಂದಿಗೆ ಶೀಘ್ರವೇ ಒಪ್ಪಂದಕ್ಕೆ ಸಹಿ ಹಾಕಲಿದೆ.

‘‘ಅಥ್ಲೀಟ್ ಸ್ವಪ್ನಾರ ಶೂ ಸಮಸ್ಯೆ ಬಗ್ಗೆ ಗೊತ್ತಾದ ತಕ್ಷಣ ಕ್ರೀಡಾ ಸಚಿವಾಲಯ ಆಕೆಯ ಪಾದಕ್ಕೆ ಒಪ್ಪುವಂತಹ ಶೂಗಳನ್ನು ಸಿದ್ಧ ಮಾಡುವಂತೆ ಆದೇಶ ನೀಡಿದೆ. ನಾವು ಈ ವಿಷಯವನ್ನು ಅಡಿಡಾಸ್ ಮುಂದಿಟ್ಟಿದ್ದೇವೆ. ಕಂಪೆನಿಯು ಶೂಗಳನ್ನು ಪೂರೈಸಲು ಒಪ್ಪಿಕೊಂಡಿದೆ’’ ಎಂದು ಸಾಯ್ ಪ್ರಧಾನ ನಿರ್ದೇಶಕ ನೀಲಂ ಕಪೂರ್ ಹೇಳಿದ್ದಾರೆ.

ಸ್ವಪ್ನಾಗೆ ಹುಟ್ಟುವಾಗಲೇ ಎರಡೂ ಕಾಲಿನಲ್ಲಿ ಆರು ಬೆರಳುಗಳಿದ್ದವು. ಕಳೆದ ತಿಂಗಳು ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಹೆಪ್ಟಾಥ್ಲಾನ್‌ನಲ್ಲಿ ಎಲ್ಲ ಸಮಸ್ಯೆಯ ನಡುವೆಯೂ ಜೀವನಶ್ರೇಷ್ಠ ಪ್ರದರ್ಶನ ನೀಡಿ ಪದಕ ಜಯಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದರು. ಚಿನ್ನ ಗೆದ್ದ ಬಳಿಕ ಸ್ವಪ್ನಾರ ಶೂ ಸಮಸ್ಯೆ ಹೆಚ್ಚು ಗಮನ ಸೆಳೆದಿತ್ತು.

ತನ್ನ ಕಾಲಿಗೆ ಒಪ್ಪುವಂತಹ ಶೂಗಳನ್ನು ಒದಗಿಸುವಂತೆ ಸ್ವಪ್ನಾ ವಿನಂತಿಸಿಕೊಂಡಿದ್ದರು. ತುರ್ತಾಗಿ ಕ್ರಮ ಕೈಗೊಳ್ಳುವಂತೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸಾಯ್‌ಗೆ ನಿರ್ದೇಶನ ನೀಡಿದ್ದರು. ಸ್ವಪ್ನಾ ಕಾಲಿನ ಅಳತೆ, ಕಾಲಿಗೆ ಒಪ್ಪುವಂತಹ ಶೂ ನಕ್ಷೆ ಸಹಿತ ಹಲವು ವಿವರವನ್ನು ನೀಡುವಂತೆಯೂ ಸ್ವಪ್ನಾರ ಕೋಚ್ ಸುಭಾಶ್ ಸರ್ಕಾರ್‌ಗೆ ಸಾಯ್ ಈಗಾಗಲೇ ಸೂಚಿಸಿದೆ.

‘‘ಸಾಯ್ ನನಗೆ ಕರೆ ಮಾಡಿ ಸ್ವಪ್ನಾರ ಕಾಲಿನ ಅಳತೆ ನೀಡುವಂತೆ ತಿಳಿಸಿದೆ. ನಾನು ಏಶ್ಯಾಗೇಮ್ಸ್ ಆರಂಭವಾಗುವ ಮೊದಲೇ ಸಾಯ್ ಅಧಿಕಾರಿಗಳೊಂದಿಗೆ ಮಾತನಾಡಿ ಸ್ವಪ್ನಾಗೆ ಸೂಕ್ತ ಶೂ ನೀಡುವಂತೆ ಕೇಳಿಕೊಂಡಿದ್ದೆ. ಆಗ ನನ್ನ ಮಾತನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈಗ ಆಕೆ ಚಿನ್ನ ಗೆದ್ದ ತಕ್ಷಣ ಸೆಲೆಬ್ರಿಟಿಯಾಗಿದ್ದು, ಎಲ್ಲ ಕಂಪೆನಿಗಳು ಸ್ವಪ್ನಾ ಹೆಸರಲ್ಲಿ ಪ್ರಚಾರ ಪಡೆಯಲು ಯತ್ನಿಸುತ್ತಿವೆ’’ಎಂದು ಸರ್ಕಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News