‘ಸ್ವಚ್ಛತೆಯೇ ಸೇವೆ ’ ಅಭಿಯಾನಕ್ಕೆ ಪ್ರಧಾನಿ ಚಾಲನೆ

Update: 2018-09-15 13:37 GMT

 ಹೊಸದಿಲ್ಲಿ,ಸೆ.15: ‘ಸ್ವಚ್ಛತೆಯೇ ಸೇವೆ ’ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು,ಸ್ವಚ್ಛತಾ ಅಭಿಯಾನದಲ್ಲಿ ಸಮಾಜದ ಎಲ್ಲ ವರ್ಗಗಳು ಮತ್ತು ದೇಶದ ಪ್ರತಿಯೊಂದು ಭಾಗವು ಪಾಲ್ಗೊಂಡಿವೆ ಎಂದರಲ್ಲದೆ ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ತಮ್ಮನ್ನು ಪುನರ್ ಅರ್ಪಿಸಿಕೊಳ್ಳುವಂತೆ ಜನರಿಗೆ ಕರೆ ನೀಡಿದರು. ಇದೇ ವೇಳೆ ಮೋದಿ ಪಹಾಡಗಂಜ್‌ನ ಬಾಬಾಸಾಹೇಬ್ ಅಂಬೇಡ್ಕರ್ ಪ್ರೌಢಶಾಲೆಯ ಆವರಣವನ್ನು ಸ್ವತಃ ಗುಡಿಸಿ ಸ್ವಚ್ಛಗೊಳಿಸಿದರು. ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರ ಸಂಪುಟ ಸಚಿವರು,ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಧಾರ್ಮಿಕ ನಾಯಕರು,ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹಾಗೂ ಅಮಿತಾಭ್ ಬಚ್ಚನ್ ಮತ್ತು ರತನ್ ಟಾಟಾರಂತಹ ಗಣ್ಯರು ಸೇರಿದಂತೆ ದೇಶಾದ್ಯಂತದ ಜನರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ವೀಡಿಯೊ ಸಂವಾದ ನಡೆಸಿದ ಅವರು,ಸ್ವಚ್ಛ ಭಾರತ ಯೋಜನೆಯಡಿ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ ನೈರ್ಮಲ್ಯದ ಹರವು ಶೇ.40ರಿಂದ ಶೇ.90ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.

ನಾಲ್ಕು ವರ್ಷಗಳಲ್ಲಿ ಒಂಭತ್ತು ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ ಮತ್ತು 4.5 ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗುತ್ತದೆ ಎಂದು ಹೆಚ್ಚಿನವರು ಭಾವಿಸಿರಲಿಲ್ಲ ಎಂದರು.

2015,ಅ.2ರಂದು ಚಾಲನೆ ನೀಡಿದ್ದ ತನ್ನ ಸರಕಾರದ ಮುಂಚೂಣಿ ಕಾರ್ಯಕ್ರಮಗಳಲ್ಲೊಂದಾಗಿರುವ ಸ್ವಚ್ಛ ಭಾರತ ಅಭಿಯಾನದಲ್ಲಿ ಸಾರ್ವಜನಿಕರ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಒತ್ತು ನೀಡುವ ಉದ್ದೇಶವನ್ನು ಹೊಂದಿರುವ ಸ್ವಚ್ಛತೆಯೇ ಸೇವೆ ಅಭಿಯಾನವು ಮುಂದಿನ ತಿಂಗಳು ಗಾಂಧಿ ಜಯಂತಿಯವರೆಗೆ ಮುಂದುವರಿಯಲಿದೆ.

ನಾಲ್ಕು ವರ್ಷಗಳಲ್ಲಿ 450ಕ್ಕೂ ಹೆಚ್ಚಿನ ಜಿಲ್ಲೆಗಳು ಅಥವಾ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲು ಸಾಧ್ಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದ ಮೋದಿ,ಇದೊಂದು ಐತಿಹಾಸಿಕ ದಿನವಾಗಿದೆ ಎಂದು ಬಣ್ಣಿಸಿದರು.

ದೇಶದ ಅತ್ಯಂತ ಹೆಚ್ಚಿನ ಜನಸಂಖ್ಯೆಯ ಮತ್ತು ಅತ್ಯಂತ ಬಡ ರಾಜ್ಯಗಳಲ್ಲೊಂದಾಗಿರುವ ಉತ್ತರ ಪ್ರದೇಶವು ಗಾಂಧಿ ಜಯಂತಿಯ ದಿನವಾದ ಅ.2ರಂದು ಬಯಲು ಶೌಚ ಮುಕ್ತ ರಾಜ್ಯವಾಗಲಿದೆ ಎಂದು ಆದಿತ್ಯನಾಥ್ ತಿಳಿಸಿದರು.

ಜನರ ಜೀವನಮಟ್ಟವನ್ನು ಹೆಚ್ಚಿಸುವಲ್ಲಿ ಸ್ವಚ್ಛತೆಯು ಪ್ರಧಾನ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದ ಮೋದಿ,ಸ್ವಚ್ಛತೆಯಿಂದ ಮೂರು ಲಕ್ಷಕ್ಕೂ ಅಧಿಕ ಜೀವಗಳನ್ನು ರಕ್ಷಿಸಬಹುದಾಗಿದೆ ಮತ್ತು ಅತಿಸಾರದ ಪ್ರಕರಣಗಳು ಶೇ.30ರಷ್ಟು ಕಡಿಮೆಯಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ತಿಳಿಸಿದರು.

 ಅಸ್ಸಾಂ,ಕೇರಳ,ತಮಿಳುನಾಡು,ಬಿಹಾರ,ಕರ್ನಾಟಕ ಇತ್ಯಾದಿ ರಾಜ್ಯಗಳ ಜನರೊಂದಿಗೆ ಮೋದಿ ಸಂವಾದ ನಡೆಸಿದರು. ಲೇಹ್‌ನಲ್ಲಿ ಪ್ಯಾಗಾಂಗ್ ಸರೋವರ ಮತ್ತು ಸುತ್ತುಮುತ್ತಲಿನ ಪ್ರದೇಶಗಳ ಸ್ವಚ್ಛತೆಯಲ್ಲಿ ತೊಡಗಿರುವ ಐಟಿಬಿಪಿ ಸಿಬ್ಬಂದಿಗಳು ಹಾಗೂ ಸದ್ಗುರು ಜಗ್ಗಿ ವಾಸುದೇವ್,ಶ್ರೀಶ್ರೀ ರವಿಶಂಕರ ಮತ್ತು ಮಾತಾ ಅಮೃತಾನಂದಮಯಿ ಸೇರಿದಂತೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಯಕರೊಂದಿಗೂ ಅವರು ಸಂವಾದ ನಡೆಸಿದರು. ಪಾಟ್ನಾಸಾಹಿಬ್ ಗುರುದ್ವಾರಾದ ಸಿಖ್ ಧಾರ್ಮಿಕ ನಾಯಕರು ಮತ್ತು ಅಜ್ಮೀರ್ ಶರೀಫ್ ದರ್ಗಾದ ಮುಸ್ಲಿಂ ಆಡಳಿತಗಾರರೊಂದಿಗೂ ಅವರು ಮಾತನಾಡಿದರು. ದೈನಿಕ ಜಾಗರಣ್ ಮಾಧ್ಯಮ ಸಮೂಹದೊಂದಿಗೂ ಸಂವಾದ ನಡೆಸಿದ ಅವರು ಸ್ವಚ್ಛ ಭಾರತ ಅಭಿಯಾನವನ್ನು ಬೆಂಬಲಿಸುವಲ್ಲಿ ವೃತ್ತಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪ್ರಯತ್ನಗಳನ್ನು ಪ್ರಶಂಸಿಸಿದರು.

 ಸ್ವಚ್ಛತಾ ಅಭಿಯಾನಕ್ಕಾಗಿ ದುಡಿಯುತ್ತಿರುವವರನ್ನು ಭವಿಷ್ಯದಲ್ಲಿ ಸ್ವಾತಂತ್ರ ಹೋರಾಟಗಾರರ ರೀತಿಯಲ್ಲಿ ನೆನೆಸಿಕೊಳ್ಳಲಾಗುತ್ತದೆ ಮತ್ತು ಅವರು ಗಾಂಧೀಜಿಯರ ನಿಜವಾದ ಉತ್ತರಾಧಿಕಾರಿಗಳಾಗುತ್ತಾರೆ ಎಂದ ಮೋದಿ, ಕಸದಿಂದ ಸಂಪತ್ತು ಸೃಷ್ಟಿಸಲು ತನ್ನ ಸರಕಾರವು ಶ್ರಮಿಸುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಸರಕಾರವೊಂದೇ ಇದನ್ನು ಮಾಡಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News