ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿದ ಪ್ರಥಮ ಭಾರತೀಯ ಪ್ರಧಾನಿ ಮೋದಿ: ಬ್ರಿಟನ್ ಪತ್ರಿಕೆ ಶ್ಲಾಘನೆ

Update: 2018-09-15 13:49 GMT

ಹೊಸದಿಲ್ಲಿ, ಸೆ.15: ‘ಆಯುಷ್ಮಾನ್ ಭಾರತ್’ ಯೋಜನೆಯ ಮೂಲಕ ಆರೋಗ್ಯ ರಕ್ಷಣೆಗೆ ಮಹತ್ವ ನೀಡಿರುವ ಪ್ರಧಾನಿ ಮೋದಿ ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿರುವ ಪ್ರಥಮ ಭಾರತೀಯ ಪ್ರಧಾನಿಯಾಗಿದ್ದಾರೆ ಎಂದು ಬ್ರಿಟನ್‌ನ ವೈದ್ಯಕೀಯ ಪತ್ರಿಕೆ ‘ದಿ ಲ್ಯಾನ್ಸೆಟ್’ ತಿಳಿಸಿದೆ.

ಭಾರತದ ಮುಂದಿನ ಮಹಾಚುನಾವಣೆಯಲ್ಲಿ ‘ಆರೋಗ್ಯ’ವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದೂ ಪತ್ರಿಕೆ ತಿಳಿಸಿದೆ. ಆರೋಗ್ಯಯುತ ಜೀವನ ಸಾಗಿಸುವುದು ದೇಶದ ನಾಗರಿಕರ ಹಕ್ಕಾಗಿದೆ ಎಂಬುದನ್ನು ಮನಗಂಡಿರುವ ಪ್ರಧಾನಿ, ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ವರ್ಗದವರ ಹೆಚ್ಚುತ್ತಿರುವ ಅಪೇಕ್ಷೆಗಳನ್ನು ಈಡೇರಿಸುವ ಮೂಲಕ ರಾಜಕೀಯ ಗುರಿ ಸಾಧಿಸುವ ಸಾಧನವಾಗಿಯೂ ಆರೋಗ್ಯಕ್ಷೇತ್ರಕ್ಕೆ ಆದ್ಯತೆ ನೀಡಿದ್ದಾರೆ ಎಂದು ‘ದಿ ಲ್ಯಾಂಕೆಟ್’ ಪತ್ರಿಕೆಯ ಪ್ರಧಾನ ಸಂಪಾದಕ ರಿಚರ್ಡ್ ಹಾರ್ಟನ್ ಹೇಳಿದ್ದಾರೆ.

ಅಲ್ಲದೆ, ಕೆಳ ವರ್ಗದ ಜನರಿಗೆ, ಆದಿವಾಸಿಗಳಿಗೆ ಹಾಗೂ ಬಡಜನರಿಗೆ ನೆರವಾಗುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಭರವಸೆಯ ಹೊರತಾಗಿಯೂ, ಅವರು ‘ಮೋದಿಕೇರ್’ (ಆಯುಷ್ಮಾನ್ ಭಾರತ್ ಯೋಜನೆ)ಗೆ ಸಾಟಿಯಾಗಲು ವಿಫಲವಾಗಿದ್ದಾರೆ ಎಂದು ಹಾರ್ಟನ್ ಹೇಳಿದ್ದಾರೆ. ಕಳೆದ ತಿಂಗಳು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಉಪನ್ಯಾಸ ನೀಡಿದ್ದ ರಾಹುಲ್ ಗಾಂಧಿ ಭಾರತದಲ್ಲಿ ತೀವ್ರವಾದ ಉದ್ಯೋಗ ಬಿಕ್ಕಟ್ಟು ತಲೆದೋರಿದೆ ಎಂದಿರುವುದನ್ನು ಉಲ್ಲೇಖಿಸಿರುವ ಪತ್ರಿಕೆ, ಆದರೆ ಭಾರತದಲ್ಲಿ ತೀವ್ರವಾದ ಆರೋಗ್ಯ ಬಿಕ್ಕಟ್ಟೂ ಇದೆ ಎಂದು ತಾನು ಪ್ರಕಟಿಸಿರುವ ವರದಿಗಳಲ್ಲಿ ತಿಳಿಸಿದೆ. ಸುದೀರ್ಘಕಾಲದ ನಿರ್ಲಕ್ಷದ ಬಳಿಕ, ಕಡೆಗೂ ಭಾರತ ಸರಕಾರ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನದಿಂದ ಆಗಬಹುದಾದ ಅಪಾಯವನ್ನು ಮನಗಂಡಿದೆ. ಈ ವರ್ಷ ಚಾಲನೆ ನೀಡಲಾಗಿರುವ ‘ಆಯುಷ್ಮಾನ್ ಭಾರತ್’ ಎಂಬ ಅಭಿಯಾನದ ಮೂಲಕ ಪ್ರಧಾನಿ ಮೋದಿ ಎರಡು ಮಹತ್ವದ ಯೋಜನೆಗಳನ್ನು ಆರಂಭಿಸಿದ್ದಾರೆ.

ಸಾರ್ವತ್ರಿಕ ಆರೋಗ್ಯ ಸುರಕ್ಷೆಯಡಿ ಪ್ರಾಥಮಿಕ ಆರೋಗ್ಯ ರಕ್ಷಣೆ ಸೇವೆ ಒದಗಿಸಲು ದೇಶದಾದ್ಯಂತ 1,50,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಆರಂಭಿಸುವುದು ಹಾಗೂ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ ಅಭಿಯಾನ(ಎನ್‌ಎಚ್‌ಪಿಎಂ)ಯಡಿ ಬಡ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವೆಚ್ಚದ ಆರೋಗ್ಯ ಸೇವೆ ಒದಗಿಸುವುದು- ಈ ಎರಡು ಯೋಜನೆಗಳಾಗಿವೆ ಎಂದು ‘ಲ್ಯಾಂಕೆಟ್’ ತಿಳಿಸಿದೆ. ಭಾರತದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಿರುವಂತೆಯೇ, ಮಾನಸಿಕ ಆರೋಗ್ಯದ ಸಮಸ್ಯೆಯೂ ಇದೆ. 2016ರಲ್ಲಿ ಭಾರತ ವಿಶ್ವದ ಶೇ.18ರಷ್ಟು ಜನಸಂಖ್ಯೆಯನ್ನು ಹೊಂದಿತ್ತು. ಆದರೆ ಮಹಿಳೆಯರ ಆತ್ಮಹತ್ಯೆ ಪ್ರಕರಣ(ಜಾಗತಿಕ)ದ ಶೇ.37ರಷ್ಟು ಮತ್ತು ಪುರುಷರ ಆತ್ಮಹತ್ಯೆ ಪ್ರಕರಣದ ಶೇ.24ರಷ್ಟು ಪ್ರಕರಣ ಭಾರತದಲ್ಲಿ ದಾಖಲಾಗಿದೆ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News