ವೇತನ ಹೆಚ್ಚಳದಿಂದ ಅಂಗನವಾಡಿ ಕಾರ್ಯಕರ್ತೆಯರ ಅತೃಪ್ತಿ ನಿವಾರಣೆ: ಜೇಟ್ಲಿ

Update: 2018-09-15 14:01 GMT

ಹೊಸದಿಲ್ಲಿ, ಸೆ.15: ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ವೇತನದಲ್ಲಿ ಸುಮಾರು ಶೇ.50ರಷ್ಟು ಹೆಚ್ಚಳ ಮಾಡಿರುವುದರಿಂದ ಸುಮಾರು 25 ಲಕ್ಷ ಕಾರ್ಯಕರ್ತರ ಅಸಮಾಧಾನ ದೂರವಾಗಿ ಅವರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಈ ಹಿಂದಿನ ಸರಕಾರಗಳು ಆದಾಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು. ಆದ್ದರಿಂದ ಜನರಲ್ಲಿ ಸರಕಾರದ ಯೋಜನೆಗಳ ಬಗ್ಗೆಯೇ ಅಪನಂಬಿಕೆ ಹುಟ್ಟಿತ್ತು. ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಯೋಜನೆಗಳ ಲಾಭ ಉದ್ದೇಶಿತ ಜನರಿಗೆ ತಲುಪುತ್ತಿರಲಿಲ್ಲ ಅಥವಾ ಯೋಜಿತ ಗುರಿ ಸಾಧಿಸಲಾಗುತ್ತಿರಲಿಲ್ಲ. ಆದರೆ ಮೋದಿ ಸರಕಾರ ಜನತೆಯ ಹಿತಚಿಂತನೆಗೆ ಹೆಚ್ಚಿನ ಆದ್ಯತೆ ನೀಡಿದೆ.

ಅಂಗನವಾಡಿ ಕಾರ್ಯಕರ್ತರು ರಾಷ್ಟ್ರೀಯ ಪೌಷ್ಠಿಕ ಯೋಜನೆಯ ಮೂಲ ಆಧಾರವಾಗಿದ್ದಾರೆ. ದೇಶದಲ್ಲಿ ಸುಮಾರು 12.9 ಲಕ್ಷ ಅಂಗನವಾಡಿ ಕಾರ್ಯಕರ್ತರು ಮತ್ತು 11.6 ಲಕ್ಷ ಅಂಗನವಾಡಿ ಸಹಾಯಕಿಯರಿದ್ದಾರೆ. ಇದೀಗ ಸರಕಾರ ನೀಡಿರುವ ಸಹಾಯ ಈ 24.9 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅವರ ಕುಟುಂಬದವರಿಗೆ ಲಭ್ಯವಾಗಲಿದೆ ಎಂದು ಜೇಟ್ಲಿ ಫೇಸ್‌ಬುಕ್‌ನಲ್ಲಿ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

2014ರಲ್ಲಿ ಪ್ರಧಾನಿಯವರು ಸ್ವಚ್ಛಭಾರತ ಅಭಿಯಾನ ಘೋಷಿಸಿದಾಗ ದೇಶದ ಶೇ.39ರಷ್ಟು ಗ್ರಾಮೀಣ ಪ್ರದೇಶ ನೈರ್ಮಲ್ಯದ ವ್ಯಾಪ್ತಿಯಡಿ ಸೇರಿತ್ತು. ಈಗ, ನಾಲ್ಕು ವರ್ಷಗಳ ಬಳಿಕ ಈ ಪ್ರಮಾಣ ಶೇ.92ಕ್ಕೇರಿದೆ. ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಬೇಕಿದ್ದರೆ ಜನತೆಯ ಸಹಕಾರ ಮತ್ತು ಜನರ ವರ್ತನೆಯಲ್ಲಿ ಆಗಿರುವ ಬದಲಾವಣೆ ಕಾರಣವಾಗಿದೆ. 2019ರಲ್ಲಿ ದೇಶ ಬಯಲುಶೌಚ ಮುಕ್ತವಾಗಬೇಕು ಎಂಬ ಸರಕಾರದ ಯೋಜನೆಯನ್ನು ಹಲವರು ಲೇವಡಿ ಮಾಡಿದ್ದಾರೆ. ಆದರೆ ಇದೀಗ ಇದು ಜನತೆಯ ಅಭಿಯಾನವಾಗಿ ಬದಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News