ರಫೇಲ್ ಕುರಿತು ಪ್ರತಿಪಕ್ಷದೊಂದಿಗೆ ಮಾತುಕತೆಗೆ ಅರ್ಥವಿಲ್ಲ: ನಿರ್ಮಲಾ ಸೀತಾರಾಮನ್

Update: 2018-09-15 14:28 GMT

ಹೊಸದಿಲ್ಲಿ,ಸೆ.15: ಬಹು ಬಿಲಿಯ ಡಾಲರ್‌ಗಳ ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತು ರಾಜಕೀಯ ಕೋಲಾಹಲಗಳ ನಡುವೆಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು,ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ವಾಸ್ತವಾಂಶಗಳನ್ನು ಈಗಾಗಲೇ ಸಂಸತ್ತಿನಲ್ಲಿ ಮಂಡಿಸಿರುವುದರಿಂದ ಈ ವಿಷಯದಲ್ಲಿ ಪ್ರತಿಪಕ್ಷಗಳೊಂದಿಗೆ ಮಾತುಕತೆ ವ್ಯರ್ಥ ಪ್ರಯತ್ನವಾಗುತ್ತದೆ ಎಂದು ಹೇಳಿದ್ದಾರೆ. ಪ್ರತಿಪಕ್ಷವು ದೇಶದ ದಾರಿಯನ್ನು ತಪ್ಪಿಸಿದೆ ಮತ್ತು ಭಾರತದ ಯುದ್ಧ ಸನ್ನದ್ಧತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯದಲ್ಲಿ ಹುರುಳಿಲ್ಲದ ಆರೋಪಗಳನ್ನು ಮಾಡಿದೆ ಎಂದೂ ಅವರು ಆಪಾದಿಸಿದ್ದಾರೆ.

ಗುರುವಾರ ಪಿಟಿಐ ಸುದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಸೀತಾರಾಮನ್ ಈ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಶನಿವಾರ ಸಮಜಾಯಿಷಿಯನ್ನು ನೀಡಿರುವ ರಕ್ಷಣಾ ಸಚಿವಾಲಯವು,ಚರ್ಚೆಗಳನ್ನು ನಡೆಸಲು ಪ್ರತಿಪಕ್ಷವು ಅರ್ಹವಲ್ಲ ಎಂದು ಸೀತಾರಾಮನ್ ಹೇಳಿರಲಿಲ್ಲ ಎಂದು ತಿಳಿಸಿದೆ.

 ಚೀನಾ ಮತ್ತು ಪಾಕಿಸ್ತಾನಗಳು ತಮ್ಮ ವೈಮಾನಿಕ ಯುದ್ಧಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತುರ್ತು ಕ್ರಮವಾಗಿ ಕೇವಲ ಎರಡು ಸ್ಕ್ವಾಡ್ರನ್‌ಗಳಷ್ಟು ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಸರಕಾರವು ನಿರ್ಧರಿಸಿದೆ ಎಂದೂ ಸೀತಾರಾಮನ್ ತಿಳಿಸಿದ್ದರು.

ಅವುಗಳನ್ನು(ಪ್ರತಿಪಕ್ಷ) ಭೇಟಿಯಾಗಿ ವಿವರಿಸುವುದರಲ್ಲಿ ಏನಾದರೂ ಅರ್ಥವಿದೆಯೇ?, ಯುಪಿಎ ಸರಕಾರದ ಅವಧಿಯಲ್ಲಿ ಒಪ್ಪಿಕೊಂಡಿರಲೂ ಇರದ ವಿಷಯದಲ್ಲಿ ಅವು ದೇಶದ ದಾರಿ ತಪ್ಪಿಸುತ್ತಿವೆ. ವಂಚನೆ ನಡೆದಿದೆಯೆಂದು ಅವು ಆರೋಪಿಸುತ್ತಿವೆ. ವಾಯುದಳದ ಯುದ್ಧ ಸನ್ನದ್ಧತೆಯ ಬಗ್ಗೆ ಅವುಗಳಿಗೆ ಕಾಳಜಿಯಿಲ್ಲ ಎಂದು ಅವರು ಕಿಡಿ ಕಾರಿದ್ದರು.

ರಫೇಲ್ ಕುರಿತು ಸರಕಾರವು ಪ್ರತಿಪಕ್ಷಗಳೊಂದಿಗೆ ಚರ್ಚಿಸುವುದೇ ಮತ್ತು 2005ರಲ್ಲಿ ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರು ಅಮೆರಿಕದೊಂದಿಗೆ ಪರಮಾಣು ಒಪ್ಪಂದವನ್ನು ಅಂತಿಮಗೊಳಿಸುವ ಮುನ್ನ ಮಾಡಿದ್ದಂತೆ ಸರಕಾರವು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಎಂದು ಸೀತಾರಾಮನ್‌ರನ್ನು ಪ್ರಶ್ನಿಸಲಾಗಿತ್ತು.

ರಫೇಲ್ ವ್ಯವಹಾರವು ಅಂತರ್-ಸರಕಾರಿ ಒಪ್ಪಂದವಾಗಿದೆ. ಪ್ರತಿಪಕ್ಷಗಳು ಕೇಳಿದ್ದ ಪ್ರಶ್ನೆಗಳಿಗೆ ತಾನು ಸಂಸತ್ತಿನಲ್ಲಿ ಉತ್ತರಿಸಿದ್ದೇನೆ. ಹೀಗಿರುವಾಗ ಅವರೊಂದಿಗೆ ಮಾತುಕತೆಗಳನ್ನು ನಡೆಸುವಲ್ಲಿ ಏನು ಅರ್ಥವಿದೆ ಎಂದು ಸಚಿವೆ ಪ್ರಶ್ನಿಸಿದ್ದರು.

ಯಾರದೇ ಬಳಿ ಉತ್ತರಗಳಿಲ್ಲದಿದ್ದಾಗ ಭಂಡ ಧೈರ್ಯ ಮತ್ತು ದುರಂಹಕಾರ ಕಾಣಿಸಿಕೊಳ್ಳುತ್ತದೆ ಎಂದು ಟ್ವೀಟಿಸುವ ಮೂಲಕ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಶನಿವಾರ ಸೀತಾರಾಮನ್‌ರನ್ನು ತರಾಟೆಗೆತ್ತಿಕೊಂಡಿದ್ದಾರೆ. ನ್ಯಾಷನಲ್ ಕಾನ್‌ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಅವರೂ ಇದೇ ಧ್ವನಿಯಲ್ಲಿ ಟೀಕಿಸಿದ್ದಾರೆ.

ತಾನು ರಕ್ಷಣಾ ಸಚಿವಾಲಯದಿಂದ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ನಿವಾರಿಸಿರುವುದರಿಂದ ಪ್ರತಿಪಕ್ಷಗಳು ಪ್ರಯತ್ನಿಸುತ್ತಿರುವಂತೆ ರಫೇಲ್ ವ್ಯವಹಾರವನ್ನು ಬೊಫೋರ್ಸ್ ವಿವಾದದೊಂದಿಗೆ ಹೋಲಿಸುವಂತಿಲ್ಲ ಎಂದೂ ಸೀತಾರಾಮನ್ ಸಂದರ್ಶನದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News