×
Ad

ಟಿವಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಸಹಜ ನಡವಳಿಕೆ: ಬ್ರಿಟನ್ ರಾಯಭಾರಿಯನ್ನು ವಾಪಸ್ ಕರೆಸಿಕೊಂಡ ಪಾಕಿಸ್ತಾನ

Update: 2018-09-15 21:34 IST

ಇಸ್ಲಾಮಾಬಾದ್, ಸೆ. 15: ಲಂಡನ್‌ನಲ್ಲಿ ನಡೆದ ಟೆಲಿವಿಶನ್ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ತೋರಿಸಿದ ಅಸಹಜ ನಡವಳಿಕೆಗೆ ವಿವರಣೆ ಕೇಳುವುದಕ್ಕಾಗಿ ಬ್ರಿಟನ್‌ಗೆ ಪಾಕಿಸ್ತಾನದ ರಾಯಭಾರಿಯನ್ನು ಇಸ್ಲಾಮಾಬಾದ್‌ಗೆ ಕರೆಸಿಕೊಳ್ಳಲಾಗಿದೆ.

ಅವರು ಕುಡಿತದ ಅಮಲಿನಲ್ಲಿದ್ದಾರೋ ಎಂಬಂತೆ ಭಾಷಣ ಮಾಡಿರುವುದನ್ನು ತೋರಿಸುವ ವೀಡಿಯೊಗಳು ಬಹಿರಂಗವಾದ ಬಳಿಕ ಈ ಬೆಳವಣಿಗೆ ನಡೆದಿದೆ.

ಹೈಕಮಿಶನರ್ ಸಾಹೇಬ್‌ಝಾದಾ ಅಹ್ಮದ್ ಖಾನ್‌ರನ್ನು ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ವಾಪಸ್ ಕರೆಸಿಕೊಂಡಿದ್ದಾರೆ.

ಈ ರಾಜತಾಂತ್ರಿಕನ ವರ್ತನೆಯಿಂದ ಬೇಸರವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಾಹೇಬ್‌ಝಾದಾ ಅಹ್ಮದ್ ಖಾನ್ 1992-93ರ ಅವಧಿಯಲ್ಲಿ ಮುಂಬೈಯಲ್ಲಿದ್ದ ಪಾಕಿಸ್ತಾನಿ ಕಾನ್ಸುಲೇಟ್‌ನಲ್ಲಿ ಉಪ ಕಾನ್ಸುಲ್ ಆಗಿ ಕೆಲಸ ಮಾಡಿದ್ದರು.

ಐಪಿಪಿಎ ಪ್ರಶಸ್ತಿ ಪ್ರದಾನ 2018 ಕಾರ್ಯಕ್ರಮ ಲಂಡನ್‌ನ ‘ಒ2 ಅರೀನಾ’ದಲ್ಲಿ ಸೆಪ್ಟಂಬರ್ 9ರಂದು ನಡೆದಿತ್ತು. ಈ ಸಂದರ್ಭದಲ್ಲಿ ಖಾನ್ ನಿಯಂತ್ರಣವಿಲ್ಲದೆ ವರ್ತಿಸುವುದನ್ನು ಹಾಗೂ ಹಲವಾರು ನಿಮಿಷಗಳ ಕಾಲ ಅಸಂಬದ್ಧವಾಗಿ ಮಾತನಾಡುವುದನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ.

ಹೈಕಮಿಶನರ್ ಶರಾಬು ಕುಡಿದು ವೇದಿಕೆಗೆ ಬಂದಿರುವಂತೆ ಕಾಣುತ್ತದೆ ಎಂಬುದಾಗಿ ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News