ಸರ್ಬಿಯ ವಿರುದ್ಧ ಭಾರತಕ್ಕೆ ಸೋಲು

Update: 2018-09-15 18:27 GMT

ಬೆಲ್‌ಗ್ರೆಡ್, ಸೆ.15: ಸರ್ಬಿಯ ವಿರುದ್ಧದ ಡೇವಿಸ್‌ಕಪ್ ವರ್ಲ್ಡ್‌ಗ್ರೂಪ್ ಪ್ಲೇ-ಆಫ್ ಪಂದ್ಯದಲ್ಲಿ ಭಾರತದ ಟೆನಿಸ್ ಆಟಗಾರರಾದ ರಾಮ್‌ಕುಮಾರ್ ರಾಮನಾಥನ್,ಪ್ರಜ್ಞೇಶ್ ಗುಣೇಶ್ವರನ್, ರೋಹನ್ ಬೋಪಣ್ಣ ಹಾಗೂ ಸಾಕೇತ್ ಮೈನೇನಿ ಸೋಲುಂಡಿದ್ದಾರೆ. ಮೂರು ಪಂದ್ಯಗಳನ್ನು ಗೆದ್ದುಕೊಂಡಿರುವ ಸರ್ಬಿಯ 3-0 ಮುನ್ನಡೆ ಸಾಧಿಸಿ ಪಂದ್ಯವನ್ನು ವಶಪಡಿಸಿಕೊಂಡಿದೆ.

ಶುಕ್ರವಾರ ನಡೆದ ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ಸೋತಿದ್ದ ಭಾರತ ಸ್ಪರ್ಧೆಯಲ್ಲಿರಲು ಶನಿವಾರ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಗೆಲ್ಲಲೇಬೇಕಾಗಿತ್ತು. ಆದರೆ, 2 ಗಂಟೆ, 22 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬೋಪಣ್ಣ-ಮೈನೇನಿ ಜೋಡಿ ಅನನುಭವಿ ಆಟಗಾರರಾದ ನಿಕೊಲಾ ಮಿಲೊಜೆವಿಕ್ ಹಾಗೂ ಡೇನಿಲೊ ಪೆಟ್ರೊವಿಕ್ ವಿರುದ್ಧ 6-7(5),2-6, 6-7(4)ಸೆಟ್‌ಗಳಿಂದ ಸೋತಿದ್ದಾರೆ. ರವಿವಾರ ರಿವರ್ಸ್ ಸಿಂಗಲ್ಸ್ ಪಂದ್ಯಗಳು ನಡೆಯುತ್ತವೆ. ಆದರೆ ಇದು ಭಾರತಕ್ಕೆ ಅಷ್ಟೇನೂ ಮಹತ್ವದ ಪಂದ್ಯವಾಗಿಲ್ಲ.

ಭಾರತ ಇಂದು ಸೋಲುಂಡಿದ್ದರೂ ಹೊಸ ನಿಯಮದ ಪ್ರಕಾರ 2019ರ ಫೆಬ್ರವರಿಯಲ್ಲಿ ನಡೆಯುವ 24 ತಂಡಗಳು ಭಾಗವಹಿಸಲಿರುವ ಡೇವಿಸ್‌ಕಪ್ ಅರ್ಹತಾ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡಿದೆ. ಡೇವಿಸ್ ಕಪ್ ಫೈನಲ್ಸ್ ಮುಂದಿನ ವರ್ಷ ನವೆಂಬರ್ 18 ರಿಂದ 24ರ ತನಕ ನಡೆಯಲಿದೆ.

 ಡೇವಿಸ್‌ಕಪ್‌ನಲ್ಲಿ ಶುಕ್ರವಾರ ಭಾರತ ವಿರುದ್ಧ ಎರಡು ಸಿಂಗಲ್ಸ್ ಪಂದ್ಯಗಳನ್ನು ಗೆದ್ದುಕೊಂಡಿದ್ದ ಸರ್ಬಿಯ 2-0 ಮುನ್ನಡೆ ಸಾಧಿಸಿತ್ತು. 3 ಗಂಟೆ, 11 ನಿಮಿಷಗಳ ಕಾಲ ನಡೆದ ಮೊದಲ ಪುರುಷರ ಸಿಂಗಲ್ಸ್ ನ ಪಂದ್ಯದಲ್ಲಿ ರಾಮ್‌ಕುಮಾರ್ ಸರ್ಬಿಯದ ಲಾಸ್ಲೊ ಜೆರೆ ವಿರುದ್ಧ 6-3, 4-6, 6-7(2),2-6 ಅಂತರದಿಂದ ಸೋತಿದ್ದಾರೆ.

ಒಂದು ಗಂಟೆ, 57 ನಿಮಿಷಗಳ ಕಾಲ ನಡೆದ ಮತ್ತೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎಡಗೈ ಆಟಗಾರ ಪ್ರಜ್ಞೇಶ್ ವಿಶ್ವದ 56ನೇ ಆಟಗಾರ ಡುಸಾನ್ ಲಾಜೊವಿಕ್ ವಿರುದ್ಧ 4-6, 3-6, 4-6 ಸೆಟ್‌ಗಳಿಂದ ಸೋಲುಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News