ಉಗ್ರರ ದೇಹದಲ್ಲಿ ಸ್ಫೋಟಕಗಳಿದ್ದುದರಿಂದ ಮೃತದೇಹ ಎಳೆದೊಯ್ಯಬೇಕಾಯಿತು: ಸೇನೆಯ ಸ್ಪಷ್ಟನೆ

Update: 2018-09-16 07:34 GMT

ಜೈಪುರ, ಸೆ.16: ಉಗ್ರರ ಮೃತದೇಹಗಳನ್ನು ಒಯ್ಯುವ ಬದಲು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸಲುವಾಗಿ ಸೇನಾ ಸಿಬ್ಬಂದಿ ಉಗ್ರಗಾಮಿಗಳ ದೇಹವನ್ನು ಎಳೆದೊಯ್ಯಬೇಕಾಯಿತು ಎಂದು ಸೇನೆಯ ನೈರುತ್ಯ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಚೆರಿಶ್ ಮ್ಯಾಥ್ಸನ್ ಹೇಳಿದ್ದಾರೆ.

"ಉಗ್ರರು ಇಐಡಿಗಳನ್ನು ಮತ್ತು ಗ್ರೆನೇಡ್ ಗಳನ್ನು ತಮ್ಮ ದೇಹಕ್ಕೆ ಕಟ್ಟಿಕೊಂಡಿದ್ದರು. ಆದ್ದರಿಂದ ಅವರ ದೇಹಗಳನ್ನು ಎತ್ತಿಕೊಂಡರೆ ಸೇನಾ ಸಿಬ್ಬಂದಿಯ ಜೀವಕ್ಕೆ ಅಪಾಯವಿತ್ತು. ಆದ್ದರಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಇಂತಹ ಸಂದರ್ಭದಲ್ಲಿ ಮೃತದೇಹಗಳನ್ನು ಹಗ್ಗಕಟ್ಟಿ ಒಯ್ಯುವುದು ಸೇನಾ ಅಭ್ಯಾಸಗಳಲ್ಲೊಂದು" ಎಂದು ಹೈಫಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯ ವೇಳೆ ಸ್ಪಷ್ಟಪಡಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಜೈಶ್ ಸಂಘಟನೆಯ ಉಗ್ರರ ಮೃತದೇಹಗಳ ಕಾಲುಗಳಿಗೆ ಹಗ್ಗ ಬಿಗಿದು ಸೈನಿಕರು ಎಳೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಸೇನೆಯಿಂದ ಈ ಸ್ಪಷ್ಟನೆ ಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ವ್ಯಾಪಕ ಆರೋಪಗಳು ಕೇಳಿಬಂದಿದ್ದವು. ರಾಜ್ಯದ ರಿಯಾಸಿ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿ, 12 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡ ಬಳಿಕ ಈ ವಿಡಿಯೊ ಹರಿದಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News