ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ: ಎಲ್ಲ ನಾಲ್ಕು ಸ್ಥಾನಗಳು ಸಂಯುಕ್ತ ಎಡರಂಗದ ಪಾಲು

Update: 2018-09-16 18:22 GMT

ಹೊಸದಿಲ್ಲಿ, ಸೆ. 15: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನ-ಎಲ್ಲಾ ನಾಲ್ಕು ಸ್ಥಾನಗಳು ಸಂಯುಕ್ತ ಎಡರಂಗದ ಪಾಲಾಗಿದೆ.

ಸಂಯುಕ್ತ ಎಡ ರಂಗ ಎಐಎಸ್‌ಎ, ಎಸ್‌ಎಫ್‌ಐ, ಎಐಎಸ್‌ಎಫ್ ಹಾಗೂ ಡಿಎಸ್‌ಎಫ್ ಸಂಘಟನೆಗಳನ್ನು ಒಳಗೊಂಡಿದೆ. 2,161 ಮತಗಳಿಂದ ಎನ್. ಸಾಯಿ ಬಾಲಾಜಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2,692 ಮತಗಳಿಂದ ಸಾರಿಕಾ ಚೌಧುರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಜಾಝ್ ಅಹ್ಮದ್ ರಾಥರ್ ಹಾಗೂ ಅಮುತಾ ಜಯದೀಪ್ ಅವರು ಪ್ರಧಾನ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಅಭ್ಯರ್ಥಿ ಲಲಿತ್ ಪಾಂಡೆ ಅವರನ್ನು 1,179 ಮತಗಳ ಅಂತರದಿಂದ ಸೋಲಿಸಿ ಬಾಲಾಜಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಲಲಿತ್ ಪಾಂಡೆ 982 ಮತಗಳನ್ನು ಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದ ಸ್ಫರ್ದೆಯಲ್ಲಿ ಎಬಿವಿಪಿಯ ಗೀತಶ್ರೀ ಬೊರೊ ಅವರು 1,012 ಮತಗಳನ್ನು ಪಡೆದಿದ್ದಾರೆ.

ಚುನಾವಣಾ ಫಲಿತಾಂಶ ಘೋಷಿಸುತ್ತಿದ್ದಂತೆ ಎಡ ಒಕ್ಕೂಟ ಕ್ಯಾಂಪಸ್‌ನಲ್ಲಿ ಸಂಭ್ರಮ ಆಚರಿಸಿತು. ಮತ ಎಣಿಕೆ ಸ್ಥಳಕ್ಕೆ ವಿದ್ಯಾರ್ಥಿಗಳು ಬಲವಂತವಾಗಿ ನುಗ್ಗಿದ ಹಿನ್ನೆಲೆಯಲ್ಲಿ ಶನಿವಾರ ಮತ ಎಣಿಕೆಯನ್ನು ರದ್ದುಗೊಳಿಸಲಾಗಿತ್ತು. ರವಿವಾರ ಬೆಳಗ್ಗೆ ಮತ ಎಣಿಕೆ ಪುನರಾರಂಭಿಸಲಾಗಿತ್ತು.

ಕಳೆದ ವರ್ಷ ಶೇ. 58 ಮತ ಚಲಾವಣೆಯಾಗಿತ್ತು. ಆದರೆ, ಈ ವರ್ಷ ಶೇ. 67.8 ಮತ ಚಲಾವಣೆಯಾಗಿದೆ.

ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಶನಿವಾರ ರಾತ್ರಿ ಯಾವುದೇ ಹಿಂಸಾಚಾರ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಆರ್‌ಎಸ್‌ಎಸ್‌ನ ಸಹ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌ನ ಕಾರ್ಯಕರ್ತರು ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ವಸಂತ್‌ಕುಂಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಡ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಸತರೂಪ ಚಕ್ರವರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News