ದಾಭೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಹಿಂದೆ ಒಂದೇ ಗುಂಪಿನ ಕೈವಾಡ: ತನಿಖಾ ವರದಿ

Update: 2018-09-16 18:24 GMT

 ಮುಂಬೈ, ಸೆ.16: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಎಂಎಂ ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಬಲಪಂಥೀಯ ಕಾರ್ಯಕರ್ತರ ಒಂದೇ ಗುಂಪಿನ ಕೈವಾಡವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನಿಖಾ ವರದಿಯನ್ನು ಉಲ್ಲೇಖಿಸಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಇದೇ ವೇಳೆ ತನಿಖಾ ಸಂಸ್ಥೆಗಳಿಗೆ ವಿಚಾರವಾದಿ ಹಾಗೂ ಕಮ್ಯುನಿಸ್ಟ್ ಮುಖಂಡ ಗೋವಿಂದ ಪನ್ಸಾರೆ ಹತ್ಯೆಯ ಹಿಂದೆ ಯಾವ ಗುಂಪಿನ ಕೈವಾಡವಿದೆ ಎಂದು ಸಾಬೀತುಪಡಿಸಲು ಇದುವರೆಗೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ‘‘ತನಿಖೆಯ ವೇಳೆ ಸಮಾನ ಮನಸ್ಕ ಗುಂಪು ದಾಭೋಲ್ಕರ್, ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಹತ್ಯೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಗುಂಪಿನ ಹೆಚ್ಚಿನ ಎಲ್ಲ ಸದಸ್ಯರು ಸನಾತನ ಸಂಸ್ಥೆ ಹಾಗೂ ಅದರ ಅಂಗಸಂಸ್ಥೆ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಹಿಂದೂ ಧರ್ಮದ ವಿರುದ್ಧ ಧ್ವನಿ ಎತ್ತುತ್ತಿದ್ದ ಕಾರಣ ಈ ಗುಂಪಿನ ಸದಸ್ಯರು ದಾಭೋಲ್ಕರ್, ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ರನ್ನು ಹತ್ಯೆಗೈದಿದ್ದಾರೆ. ಪಾಲ್ಘರ್ ಜಿಲ್ಲೆಯ ನಲಾಸೋಪಾರದಲ್ಲಿ ಭಾರೀ ಸ್ಫೋಟಕಗಳೊಂದಿಗೆ ಬಂಧಿಸಲ್ಪಟ್ಟಿರುವವರೂ ದಾಭೋಲ್ಕರ್, ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆನ್ನುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌರಿ ಹತ್ಯೆ ಸಂದರ್ಭ ಬಳಸಲಾದ ಬೈಕ್ ವಶಕ್ಕೆ

ಗೌರಿ ಲಂಕೇಶ್ ಹತ್ಯೆ ಸಂದರ್ಭ ಬಳಸಲಾದ ಮೋಟಾರು ಸೈಕಲ್ ಪತ್ತೆಯಾಗಿದೆ ಎಂದು ಮಹಾರಾಷ್ಟ್ರ ಪೊಲೀಸ್‌ನ ವಿಶೇಷ ತನಿಖಾ ತಂಡ ಶನಿವಾರ ಸಂಜೆ ಹೇಳಿದೆ. ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟಕ ಪತ್ತೆಯಾದ ಪ್ರಕರಣದ ಆರೋಪಿಗಳಿಗೆ ಈ ಹತ್ಯೆಗಳಲ್ಲಿ ಇರಬಹುದಾದ ಕೈವಾಡದ ಬಗ್ಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಎಟಿಎಸ್ ತನಿಖೆ ನಡೆಸುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಬಂಧಿತರಾಗಿರುವ ಕೆಲವು ಆರೋಪಿಗಳು ದಾಭೋಲ್ಕರ್ ಹತ್ಯೆಯ ಪಿತೂರಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕಳೆದ ತಿಂಗಳು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News