ಸರಕಾರದ ನೀತಿಗಳನ್ನು ವಿರೋಧಿಸದಂತೆ ಒತ್ತಡ, ಕ್ಯಾಂಪಸ್ ಕೇಸರೀಕರಣಕ್ಕೆ ಪ್ರಯತ್ನ

Update: 2018-09-16 10:37 GMT

 ಚೆನ್ನೈ,ಸೆ.16: ತಮಿಳುನಾಡಿನ ತಿರುವಾವೂರಿನ ಕೇಂದ್ರೀಯ ವಿವಿಯ ರಿಜಿಸ್ಟ್ರಾರ್‌ ಇತ್ತೀಚಿಗೆ ಹೊರಡಿಸಿರುವ,ಸರಕಾರದ ನೀತಿಗಳ ವಿರುದ್ಧ ಅನಧಿಕೃತ ಚಟುವಟಿಕೆಗಳಲ್ಲಿ ತೊಡಗದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಸುತ್ತೋಲೆಯು ಬೃಹತ್ ಸಮಸ್ಯೆಯೊಂದರ ಸಣ್ಣ ನಿದರ್ಶನದಂತೆ ಕಂಡು ಬರುತ್ತಿದೆ. ವಿವಿಯ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳು ತಿಳಿಸಿರುವಂತೆ ಭಿನ್ನಾಭಿಪ್ರಾಯಗಳನ್ನು ದಮನಿಸುವ ಮತ್ತು ಕ್ಯಾಂಪಸ್‌ನ್ನು ಕೇಸರೀಕರಣಗೊಳಿಸುವ ಪ್ರಯತ್ನಗಳು ಒಂದು ವರ್ಷದ ಹಿಂದೆಯೇ ಆರಂಭಗೊಂಡಿದ್ದವು.

2009ರಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿವಿ ಕ್ಯಾಂಪಸ್ ಜಲ್ಲಿಕಟ್ಟು ಪ್ರತಿಭಟನೆಗಳು ಭುಗಿಲೇಳುವವರೆಗೆ ಶಾಂತಿಯುತವಾಗಿಯೇ ಇತ್ತು. ‘‘ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಲ್ಲಿಕಟ್ಟು ಪ್ರತಿಭಟನೆಯನ್ನು ಬೆಂಬಲಿಸಿದ್ದರು. ಅದರ ಮರುದಿನವೇ ಪ್ರತಿಭಟನಾಕಾರರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿತ್ತು. ಅದಕ್ಕೆ ಬಗ್ಗದೆ ನಾವು ಪ್ರತಿಭಟನೆಯನ್ನು ಮುಂದುವರಿಸಿದ್ದೆವು,ಆದರೆ ಎಚ್ಚರಿಕೆ ನೀಡಿದ್ದಂತೆ ನಮ್ಮ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿರಲಿಲ್ಲ ’’ ಎಂದು ಮಾಜಿ ವಿದ್ಯಾರ್ಥಿಯೋರ್ವರು ತಿಳಿಸಿದರು.

ಕಳೆದ ಎಪ್ರಿಲ್‌ನಲ್ಲಿ ಹಾಸ್ಟೆಲ್‌ನ ಮೆಸ್‌ನಲ್ಲಿ ಪೂರೈಸಲಾಗುತ್ತಿರುವ ಊಟದ ಕಳಪೆ ಗುಣಮಟ್ಟದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಆಡಳಿತವು ‘ತಮ್ಮ ಮಕ್ಕಳನ್ನು ನಿಯಂತ್ರಿಸುವಂತೆ ’ಸೂಚಿಸಿ ವಿದ್ಯಾರ್ಥಿಗಳ ಕುಟುಂಬಗಳಿಗೆ ಪತ್ರಗಳನ್ನು ರವಾನಿಸಿತ್ತು.

ಆದರೆ ಕಳೆದ ವರ್ಷ ವಿವಿಯ ಕ್ಯಾಂಪಸ್‌ನಲ್ಲಿ ಎಬಿವಿಪಿ ಘಟಕದ ಸ್ಥಾಪನೆಯಾದಾಗ ವಿದ್ಯಾರ್ಥಿ ಸಮುದಾಯಕ್ಕೆ ಭಾರೀ ಆಘಾತವುಂಟಾಗಿತ್ತು. ‘‘ಎಬಿವಿಪಿ ಸ್ಥಾಪನೆಯಲ್ಲಿ ಪ್ರಾಧ್ಯಾಪಕರೋರ್ವರ ಕೈವಾಡವಿತ್ತು ಎನ್ನುವುದು ನಮಗೆ ಗೊತ್ತು. ಆಗಿಂದಾಗ್ಗೆ ಕ್ಯಾಂಪಸ್‌ನಲ್ಲಿ,ಹಿಂದಿ ವಿಭಾಗದ ತರಗತಿ ಕೋಣೆಯಲ್ಲಿ ಎಬಿವಿಪಿ ಸಭೆಗಳು ನಡೆಯುತ್ತಿದ್ದವು ’’ಎಂದು ಇನ್ನೋರ್ವ ವಿದ್ಯಾರ್ಥಿ ತಿಳಿಸಿದರು.

 ಕೆಲವು ವಿದ್ಯಾರ್ಥಿಗಳು ಸಹ ಎಡಪಂಥೀಯ ಎಸ್‌ಎಫ್‌ಐ ಸದಸ್ಯರಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಂಡ ಅವರು,ಆದರೆ ಅದೆಂದೂ ಕ್ಯಾಂಪಸ್‌ನೊಳಗೆ ತನ್ನ ಚಟುವಟಿಕೆಗಳನ್ನು ನಡೆಸಿಲ್ಲ. ಯಾವುದೇ ಸಂಘಟನೆಯೊಂದಿಗೆ ಗುರುತಿಸಿಕೊಂಡಿರದ ಫ್ರೀಡಂ ಸ್ಪೀಕರ್ಸ್ ಎಂಬ ಅಧ್ಯಯನ ಕೇಂದ್ರವನ್ನು ನಾವು ರಚಿಸಿದ್ದೇವೆ,ಆದರೂ ಅದರ ಉದ್ದೇಶದ ಬಗ್ಗೆ ನಮ್ಮನ್ನು ಪ್ರಶ್ನಿಸಲಾಗಿತ್ತು ಎಂದರು.

ಕ್ಯಾಂಪಸ್‌ನಲ್ಲಿ ಹಿಂದಿ ಕ್ಲಬ್ ವಿವೇಕ ಅಗ್ನಿಹೋತ್ರಿಯವರ ‘ಬುದ್ಧ ಇನ್ ಟ್ರಾಫೀಕ್ ಜಾಮ್’ಚಿತ್ರವನ್ನು ಪ್ರದರ್ಶಿಸಿತ್ತು. ಆದರೆ ವಿದ್ಯಾರ್ಥಿಗಳು ಮಾಧ್ಯಮ ವಿಭಾಗದ ಮೂಲಕ ಆನಂದ ಪಟವರ್ಧನ್‌ರ ‘ರಾಮ್ ಕೆ ನಾಮ್’ಚಿತ್ರವನ್ನು ಪ್ರದರ್ಶಿಸಲು ಬಯಸಿದ್ದಾಗ ಅನುಮತಿಯನ್ನು ನಿರಾಕರಿಸಲಾಗಿತ್ತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ವಿವಿ ಆಡಳಿತವು ಹಿಂದುತ್ವ ಸಿದ್ಧಾಂತವಾದಿ ದೀನದಯಾಳ ಉಪಾಧ್ಯಾಯ ಅವರ ಜನ್ಮಶತಾಬ್ದಿಯ ಅಂಗವಾಗಿ ‘21ನೇ ಶತಮಾನದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ರಾಜಕೀಯ ಸಿದ್ಧಾಂತದ ಪ್ರಸಕ್ತತೆ’ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದು ವಿದ್ಯಾರ್ಥಿಗಳನ್ನು ಕೆರಳಿಸಿತ್ತು. ಇದು ಶೈಕ್ಷಣಿಕ ಕೇಸರಿಕರಣದ ಪ್ರಯತ್ನವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರು,ಆದರೆ ಸ್ಪರ್ಧೆಗೆ ಅಡ್ಡಿಯನ್ನುಂಟು ಮಾಡುವ ಕೆಲಸಕ್ಕೆ ಮುಂದಾಗಿರಲಿಲ್ಲ.

ತಮಿಳುನಾಡಿನಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಳ್ಳುವುದು ಕಷ್ಟ ಎನ್ನುವುದನ್ನು ಅರಿತಿರುವ ಹಿಂದುತ್ವ ಶಕ್ತಿಗಳು ಈಗ ಶಿಕ್ಷಣ ಸಂಸ್ಥೆಗಳ ಮೂಲಕ ನೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಎಸ್‌ಎಫ್‌ಐ ತಮಿಳುನಾಡು ಘಟಕದ ಕಾರ್ಯದರ್ಶಿ ವಿ.ಮಾರಿಯಪ್ಪನ್ ಹೇಳಿದರು. ಕೆಲವು ತಿಂಗಳುಗಳ ಹಿಂದೆ ಭಗಿನಿ ನಿವೇದಿತಾ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರ್ಯಾಲಿಯೊಂದನ್ನು ಬೆಟ್ಟು ಮಾಡಿದ ಅವರು,ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಬಿಜೆಪಿಯು ಈ ರ್ಯಾಲಿಯನ್ನು ಬಳಸಿಕೊಂಡಿತ್ತು ಎಂದರು.

ತಿರುವಾವೂರಿನ ಕೇಂದ್ರಿಯ ವಿವಿಯಂತಹ ಕ್ಯಾಂಪಸ್‌ನಲ್ಲಿ ಎಬಿವಿಪಿ ಬಹಿರಂಗವಾಗಿಯೇ ಕಾರ್ಯಾಚರಿಸುತ್ತಿದ್ದರೆ,ಎಸ್‌ಎಫ್‌ಐ ಜೊತೆಗೆ ಗುರುತಿಸಿಕೊಂಡಿದ್ದಾರೆಂಬ ಏಕೈಕ ಕಾರಣದಿಂದ ಅಂತಹ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಇಂದು ರಾಜ್ಯದ ಕನಿಷ್ಠ ಮೂರು ವಿವಿಗಳ ಕುಲಪತಿಗಳು ಬಲಪಂಥೀಯ ಪ್ರತಿಪಾದಕರಾಗಿದ್ದಾರೆ. ತಮಿಳುನಾಡಿನಲ್ಲಿ ರಾಜಾರೋಷವಾಗಿ ಶೈಕ್ಷಣಿಕ ಕೇಸರೀಕರಣ ನಡೆಯುತ್ತಿದ್ದರೂ ಎಐಎಡಿಎಂಕೆ ಸರಕಾರವು ಕುರುಡಾಗಿರುವುದು ವಿಷಾದನೀಯವಾಗಿದೆ ಎಂದು ಅವರು ಹೇಳಿದರು.

Writer - ಕವಿತಾ ಮುರಳೀಧರನ್, thewire.in

contributor

Editor - ಕವಿತಾ ಮುರಳೀಧರನ್, thewire.in

contributor

Similar News